ಬೆಳಗಾವಿ, 19 (DaijiworldNews/AK): ದಲಿತರ ಉದ್ಧಾರ ಮಾಡದೇ ವಂಚನೆಗೆ ಕಾರಣರಾದ ಸಚಿವ ಮಹದೇವಪ್ಪ ಅವರು ತಕ್ಷಣ ರಾಜೀನಾಮೆ ಕೊಡಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಇಂದು ಇಲ್ಲಿ ಮಾತನಾಡಿದ ಅವರು, ಸಚಿವ ಮಹದೇವಪ್ಪ ಅವರು ದಲಿತ ವಿರೋಧಿ ಎಂದು ಆಕ್ಷೇಪಿಸಿದರು. ಇವರು ಕೇವಲ ತಮ್ಮ ಬಾಸ್ಗಳನ್ನು ಓಲೈಕೆ ಮಾಡಿಕೊಂಡು ಲೂಟಿ ಮಾಡಿ, ಇವರ ಕುಟುಂಬಗಳನ್ನು ಉದ್ಧಾರ ಮಾಡುತ್ತಿದ್ದಾರೆ; ಸಮುದಾಯಗಳ ಉದ್ಧಾರ ಇವರಿಂದ ಆಗುತ್ತಿಲ್ಲ ಎಂದು ಟೀಕಿಸಿದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನೀವು ಇವತ್ತು ಅಧಿಕಾರ ನಡೆಸುತ್ತಿದ್ದೀರಿ ಎಂದು ಆರೋಪಿಸಿದರು. ಡಾ. ಅಂಬೇಡ್ಕರ್ ಅವರು ಬದುಕಿದ್ದರೆ ಇಂಥವರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತಿದ್ದರು ಎಂದು ತಿಳಿಸಿದರು. ಇವರು ದಲಿತರ ಸರ್ವನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಎಸ್ಇಪಿ, ಟಿಎಸ್ಪಿ ಹಣದ ಲೂಟಿ, ಜನರಿಗೆ ವಂಚನೆ ಕಾರ್ಯ ನಡೆಯುತ್ತಿದೆ. ಅವರಿಗೆ ಏನೂ ಸಿಗದಂತೆ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಒಳ ಮೀಸಲಾತಿಯಲ್ಲೂ ಸಂಪೂರ್ಣ ತಾರತಮ್ಯ
ಒಳ ಮೀಸಲಾತಿಯಲ್ಲೂ ಸಂಪೂರ್ಣ ತಾರತಮ್ಯ ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. ಯಾರಿಗೂ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ಈ ಕುರಿತ ಮಸೂದೆ ಬರಲಿದೆ ಎಂದು ತಿಳಿಸಿದರು.
ಎಸ್ಇಪಿ, ಟಿಎಸ್ಪಿ ಹಣವನ್ನು ಅನ್ಯಕಾರ್ಯಗಳಿಗೆ ಬಳಸಿ ಪರಿಶಿಷ್ಟ ಜಾತಿ, ವರ್ಗ- ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ; ಸರಕಾರದ ಈ ಕ್ರಮ ಖಂಡನೀಯ ಎಂದು ತಿಳಿಸಿದರು. ಸಚಿವ ಮಹದೇವಪ್ಪ ಅವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.