ಗುಜರಾತ್, ಡಿ. 15 (DaijiworldNews/TA): ಭಾರತ ವೈವಿಧ್ಯತೆಯಿಂದ ಕೂಡಿದ ದೇಶ. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವಿಶಿಷ್ಟತೆ ಮತ್ತು ಸಂಪ್ರದಾಯಗಳಿವೆ. ಅಂಥದ್ದೇ ಒಂದು ಅಪರೂಪದ ಪ್ರಯೋಗದ ಮೂಲಕ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಚಂದಾಂಕಿ ಗ್ರಾಮ ಇಂದು ಇಡೀ ಜಗತ್ತಿನ ಗಮನ ಸೆಳೆದಿದೆ.

ಈ ಗ್ರಾಮವನ್ನು ಸಾಮಾನ್ಯ ಗ್ರಾಮ ಎನ್ನುವುದಕ್ಕಿಂತ ‘ಸಮುದಾಯ ಗ್ರಾಮ’ ಎಂದು ಕರೆಯುವುದೇ ಹೆಚ್ಚು ಸೂಕ್ತ. ಸುಮಾರು 500 ಮಂದಿ ವಾಸಿಸುವ ಈ ಗ್ರಾಮದಲ್ಲಿ ಬಹುತೇಕ ಜನರು ತಮ್ಮ ತಮ್ಮ ಮನೆಯಲ್ಲಿ ನಿತ್ಯ ಅಡುಗೆ ಮಾಡುವುದಿಲ್ಲ. ಬದಲಾಗಿ, ಎಲ್ಲರೂ ಒಟ್ಟಾಗಿ ಊಟ ಮಾಡುವ ಸಮುದಾಯ ಅಡುಗೆ ಮನೆ ವ್ಯವಸ್ಥೆಯನ್ನು ಇಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಗ್ರಾಮದಲ್ಲಿ ಸಹೋದರ ಭಾವ, ಒಗ್ಗಟ್ಟು ಮತ್ತು ಪರಸ್ಪರ ಸಹಕಾರ ಮತ್ತಷ್ಟು ಗಟ್ಟಿಯಾಗಿದೆಯೆಂದು ಗ್ರಾಮಸ್ಥರು ಹೇಳುತ್ತಾರೆ.
ಚಂದಾಂಕಿ ಗ್ರಾಮದಲ್ಲಿ ಈ ವ್ಯವಸ್ಥೆ ಹುಟ್ಟಿಕೊಂಡಿರುವುದಕ್ಕೆ ಪ್ರಮುಖ ಕಾರಣ ವೃದ್ಧರ ಸಮಸ್ಯೆ. ಗ್ರಾಮದಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು. ಯುವಕರು ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ನಗರಗಳತ್ತ ವಲಸೆ ಹೋಗಿದ್ದು, ಹಲವರು ವಿದೇಶಗಳಲ್ಲೂ ನೆಲೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವೃದ್ಧರು ದಿನನಿತ್ಯ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವುದು ಕಷ್ಟಕರವಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎಲ್ಲರೂ ಸೇರಿ ಒಂದೇ ಸ್ಥಳದಲ್ಲಿ ಅಡುಗೆ ಮಾಡಿ, ಒಟ್ಟಿಗೆ ಊಟ ಮಾಡುವ ಯೋಚನೆ ಮೂಡಿತು. ಆರಂಭದಲ್ಲಿ ಅನಿವಾರ್ಯವಾಗಿ ಆರಂಭವಾದ ಈ ಕಮ್ಯೂನಿಟಿ ಕಿಚನ್ ವ್ಯವಸ್ಥೆ, ಈಗ ಗ್ರಾಮಕ್ಕೆ ಹೊಸ ಗುರುತು ಮತ್ತು ಖ್ಯಾತಿಯನ್ನು ತಂದಿದೆ.
ಈ ಸಮುದಾಯ ಅಡುಗೆ ಮನೆಯ ಹಿಂದೆ ಗ್ರಾಮ ಮುಖ್ಯಸ್ಥ ಪೂನಂಭಾಯಿ ಪಟೇಲ್ ಅವರ ಪಾತ್ರ ಮಹತ್ವದ್ದು. ಅವರ ಆಲೋಚನೆಯೇ ಇಂದು ಚಂದಾಂಕಿ ಗ್ರಾಮದಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದೆ. ಪ್ರಸ್ತುತ ಗ್ರಾಮದಲ್ಲಿ ಸುಮಾರು 500 ಮಂದಿ ಪ್ರತಿದಿನ ಒಂದೇ ಸ್ಥಳದಲ್ಲಿ ಕುಳಿತು ಊಟ ಮಾಡುತ್ತಾರೆ. ಈ ವ್ಯವಸ್ಥೆಯನ್ನು ನಿರ್ವಹಿಸಲು ಗ್ರಾಮದಲ್ಲಿ ವಾಸಿಸುವ ಪ್ರತಿಯೊಬ್ಬರೂ ತಿಂಗಳಿಗೆ ಎರಡು ಸಾವಿರ ರೂಪಾಯಿಯನ್ನು ಕಮ್ಯೂನಿಟಿ ಕಿಚನ್ಗೆ ಪಾವತಿಸುತ್ತಾರೆ. ಅಡುಗೆ ತಯಾರಿಸಲು ವಿಶೇಷವಾಗಿ ಕೆಲಸಗಾರರನ್ನು ನೇಮಿಸಲಾಗಿದ್ದು, ಅವರಿಗೆ ತಿಂಗಳಿಗೆ ಸುಮಾರು 11 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ.
ಇಷ್ಟೇ ಅಲ್ಲದೆ, ಪ್ರತಿದಿನ ಸುಮಾರು 50ರಿಂದ 60 ಮಂದಿ ಹಿರಿಯರು ಸ್ವಯಂಪ್ರೇರಿತವಾಗಿ ಅಡುಗೆ ತಯಾರಿಸುವ ಕೆಲಸಕ್ಕೆ ಕೈಜೋಡಿಸುತ್ತಾರೆ. ನಿತ್ಯ ಅನ್ನ, ಸಾಂಬಾರ್, ತರಕಾರಿ, ಚಪಾತಿ ಸೇರಿದಂತೆ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಆಹಾರವನ್ನು ಇಲ್ಲಿ ತಯಾರಿಸಲಾಗುತ್ತದೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ವಿಶೇಷ ಆಹಾರ ಪದಾರ್ಥಗಳನ್ನೂ ಸಿದ್ಧಪಡಿಸಲಾಗುತ್ತದೆ. ಈ ವ್ಯವಸ್ಥೆಯಿಂದ ಗ್ರಾಮಸ್ಥರು ಒಬ್ಬರ ಮೇಲೊಬ್ಬರು ಅವಲಂಬನೆಯಿಲ್ಲದೆ, ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.
ಒಂದು ಕಾಲದಲ್ಲಿ ಕಂಡುಬಂದ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ಚಂದಾಂಕಿ ಗ್ರಾಮ ಮತ್ತೆ ಜೀವಂತಗೊಳಿಸಿದಂತಾಗಿದೆ. ಇಲ್ಲಿ ಎಲ್ಲರೂ ಒಟ್ಟಿಗೆ ಊಟ ಮಾಡಿ, ಒಟ್ಟಿಗೆ ಬದುಕುವ ಸಂಸ್ಕೃತಿ ಬೆಳೆದಿದ್ದು, ಈ ವಿಶಿಷ್ಟ ಪ್ರಯೋಗ ಇಂದು ಇತರ ಗ್ರಾಮಗಳಿಗೆ ಕೂಡ ಮಾದರಿಯಾಗುತ್ತಿದೆ. ಸಮುದಾಯದ ಒಗ್ಗಟ್ಟು ಮತ್ತು ಸಹಕಾರದ ಮೂಲಕ ಚಂದಾಂಕಿ ಗ್ರಾಮ ದೇಶದ ಗಮನ ಸೆಳೆಯುವಂತಹ ಉದಾಹರಣೆಯಾಗಿ ಹೊರಹೊಮ್ಮಿದೆ.