ಜಮ್ಮು, ಡಿ. 15 (DaijiworldNews/AA): ಕಾಂಗ್ರೆಸ್ ಎತ್ತಿರುವ 'ವೋಟ್ ಚೋರಿ' ವಿವಾದದಿಂದ ದೂರ ಉಳಿದಿರುವ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ಇದಕ್ಕೂ ಇಂಡಿಯಾ ಬಣ'ಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

"ಮತ ಚೋರಿ ಮತ್ತು ಚುನಾವಣಾ ಅಕ್ರಮ ಕುರಿತು ಕಾಂಗ್ರೆಸ್ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ಲಾ, ಇದಕ್ಕೂ ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷವು ತನ್ನದೇ ಆದ ಅಜೆಂಡಾ ರೂಪಿಸಲು ಸ್ವತಂತ್ರವಾಗಿದೆ. ಕಾಂಗ್ರೆಸ್ 'ವೋಟ್ ಚೋರಿ' ಮತ್ತು ಎಸ್ಐಆರ್ ಅನ್ನು ತನ್ನ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದೆ. ಇದನ್ನು ಮಾಡಬೇಡಿ ಎಂದು ಹೇಳಲು ನಾವು ಯಾರು?" ಎಂದು ಅವರು ಪ್ರಶ್ನಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ವೋಟ್ ಚೋರ್ ಗಡ್ಡಿ ಛೋಡ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಚುನಾವಣಾ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಒಂದು ದಿನದ ಬಳಿಕ ಸಿಎಂ ಒಮರ್ ಅಬ್ದುಲ್ಲಾ ಈ ರೀತಿಯ ಹೇಳಿಕೆ ನೀಡಿದ್ದಾರೆ.