ನವದೆಹಲಿ, ಡಿ. 15 (DaijiworldNews/TA): ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳು ಕೇಳಿಬಂದ ಬೆನ್ನಲ್ಲೇ ಸಂಸತ್ತಿನ ಎರಡೂ ಸದನಗಳಲ್ಲಿ ಭಾರಿ ರಾಜಕೀಯ ಗದ್ದಲ ಉಂಟಾಯಿತು. “ಮೋದಿ, ನಿಮ್ಮ ಸಮಾಧಿಯನ್ನು ಇಂದು ಅಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ” ಎಂಬ ಘೋಷಣೆಗಳು ಕೇಳಿಬಂದಿವೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ, ಆಡಳಿತಾರೂಢ ಬಿಜೆಪಿ ನಾಯಕರು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಈ ವಿಷಯವನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ನಡೆದ ಘೋಷಣೆಗಳು ಅತ್ಯಂತ ನಾಚಿಕೆಗೇಡಿನ ಹಾಗೂ ದುರದೃಷ್ಟಕರವಾಗಿವೆ ಎಂದು ಕಿಡಿಕಾರಿದರು. ಪ್ರಧಾನಿ ವಿರುದ್ಧ ಇಂತಹ ಭಾಷೆ ಬಳಸುವುದು ಕಾಂಗ್ರೆಸ್ ಪಕ್ಷ ರಾಜಕೀಯದ ಕೀಳು ಮಟ್ಟವನ್ನು ತಲುಪಿರುವುದಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದರು. ಈ ಘಟನೆಗೆ ಕಾಂಗ್ರೆಸ್ ಪಕ್ಷದ ನಾಯಕತ್ವ ನೈತಿಕ ಹೊಣೆ ಹೊತ್ತು ದೇಶದ ಜನತೆಗೆ ಕ್ಷಮೆಯಾಚಿಸಬೇಕು ಎಂದು ಕಿರಣ್ ರಿಜಿಜು ಆಗ್ರಹಿಸಿದರು.
ಕಿರಣ್ ರಿಜಿಜು ಮಾತಿಗೆ ಸದನದಲ್ಲಿದ್ದ ಅನೇಕ ಬಿಜೆಪಿ ಸಂಸದರು ಮತ್ತು ಸಚಿವರು ಬೆಂಬಲ ವ್ಯಕ್ತಪಡಿಸಿದರು. ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಒಗ್ಗಟ್ಟಾಗಿ ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚನೆಗೆ ಆಗ್ರಹಿಸಿದರು. ಈ ವೇಳೆ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ತೀವ್ರಗೊಂಡು ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಇತ್ತ ರಾಜ್ಯಸಭೆಯಲ್ಲಿಯೂ ಇದೇ ವಿಚಾರ ಭಾರಿ ಚರ್ಚೆಗೆ ಕಾರಣವಾಯಿತು. ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ, ಕಾಂಗ್ರೆಸ್ ರ್ಯಾಲಿಯಲ್ಲಿ ಕೇಳಿಬಂದ ಘೋಷಣೆಗಳು ಪಕ್ಷದ ನಿಜವಾದ ಚಿಂತನೆ ಮತ್ತು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಟೀಕಿಸಿದರು. ದೇಶದ ಪ್ರಧಾನಿಯ ವಿರುದ್ಧ ಇಂತಹ ಮಾತುಗಳನ್ನು ಹೇಳುವುದು ಹಾಗೂ ಅವರ ಸಾವನ್ನು ಬಯಸುವ ರೀತಿಯ ಘೋಷಣೆಗಳು ಅತ್ಯಂತ ಖಂಡನೀಯ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ರಾಜಕೀಯ ಸಂಸ್ಕೃತಿಯನ್ನು ಕೆಳಮಟ್ಟಕ್ಕೆ ಇಳಿಸಿದ್ದು, ಈ ಹೇಳಿಕೆಗಳಿಗೆ ಸೋನಿಯಾ ಗಾಂಧಿ ಹೊಣೆ ಹೊತ್ತು ಕ್ಷಮೆಯಾಚಿಸಬೇಕು ಎಂದು ನಡ್ಡಾ ಆಗ್ರಹಿಸಿದರು.
ಜೆ.ಪಿ. ನಡ್ಡಾ ಅವರ ಹೇಳಿಕೆಯ ಬಳಿಕ ರಾಜ್ಯಸಭೆಯಲ್ಲೂ ಭಾರಿ ಕೋಲಾಹಲ ಉಂಟಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಘೋಷಣೆ ಕೂಗಿದ ಪರಿಣಾಮ ಸದನದ ಕಾರ್ಯಚಟುವಟಿಕೆ ಅಸ್ತವ್ಯಸ್ತಗೊಂಡಿತು. ಗದ್ದಲ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಉಪಸಭಾಪತಿ ಹರಿವಂಶ್ ಅವರು ಸದನವನ್ನು ಮುಂದೂಡಬೇಕಾಯಿತು.
ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಇಂತಹ ಘೋಷಣೆಗಳನ್ನು ಕಾಂಗ್ರೆಸ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು. ಈ ವಿಚಾರ ಇದೀಗ ಸಂಸತ್ತಿನ ಒಳಗೂ ಹೊರಗೂ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾವು ಪಡೆಯುವ ಸಾಧ್ಯತೆ ಇದೆ.