ಬೆಂಗಳೂರು, ಡಿ. 15 (DaijiworldNews/TA): ಅಯೋಧ್ಯೆಯ ರಾಮಭಕ್ತನಾಗಿರುವ ಬೆಂಗಳೂರಿನ ಹಿರಿಯ ಉದ್ಯಮಿಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಬಿದ್ದು 8.3 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಷೇರು ಮಾರುಕಟ್ಟೆಯಲ್ಲಿ ಲಾಭದಾಯಕ ಹೂಡಿಕೆ ಮಾಡುವಂತೆ ನಂಬಿಸಿ ಸೈಬರ್ ವಂಚಕರು ಈ ಮೊತ್ತವನ್ನು ಪೀಕಿದ್ದಾರೆ. ವಂಚನೆಗೆ ಒಳಗಾದವರು 71 ವರ್ಷದ ರಾಜೇಂದ್ರ ನಾಯ್ಡು ಎಂಬ ಉದ್ಯಮಿ. ಅವರು ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದ ರಾಮಭಕ್ತರಾಗಿದ್ದಾರೆ.

ಹಿಂದೆ ರಿಲಯನ್ಸ್ ಕ್ಯಾಪಿಟಲ್ನಿಂದ ಸಾಲ ಪಡೆದು ಸಂಪೂರ್ಣವಾಗಿ ತೀರಿಸಿದ್ದ ಹಿನ್ನೆಲೆಯನ್ನು ತಿಳಿದಿದ್ದ ಸೈಬರ್ ವಂಚಕರು, ಈ ಮಾಹಿತಿಯನ್ನು ಬಳಸಿಕೊಂಡು ನಾಯ್ಡು ಅವರನ್ನು ಸಂಪರ್ಕಿಸಿದ್ದರು. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ ಎಂದು ನಂಬಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಪ್ರಲೋಭನೆ ಒಡ್ಡಿದರು. ಲಾಭದಿಂದ ದಾನ-ಧರ್ಮ ಕಾರ್ಯಗಳನ್ನು ಮಾಡುವ ಉದ್ದೇಶ ಹೊಂದಿದ್ದ ರಾಜೇಂದ್ರ ನಾಯ್ಡು, ವಂಚಕರ ಮಾತುಗಳನ್ನು ನಂಬಿ ಹೂಡಿಕೆಗೆ ಮುಂದಾದರು.
ವಂಚಕರು ರಿಲಯನ್ಸ್ ಕಂಪನಿಯ ಹೆಸರನ್ನು ಬಳಸಿಕೊಂಡು ವಿಶ್ವಾಸ ಮೂಡಿಸಿ, RARCLLPRO ಎಂಬ ಮೊಬೈಲ್ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸಿದ್ದರು. ಆ್ಯಪ್ನಲ್ಲಿ ಹೂಡಿಕೆಯ ವಿವರಗಳು ಮತ್ತು ಲಾಭಾಂಶ ತೋರಿಸಲಾಗುತ್ತಿತ್ತು. ಮೊದಲ ಹಂತದಲ್ಲಿ ನಾಯ್ಡು 25 ಲಕ್ಷ ರೂಪಾಯಿಯನ್ನು RTGS ಮೂಲಕ ವರ್ಗಾಯಿಸಿದ್ದರು. ಬಳಿಕ ಆ್ಯಪ್ನಲ್ಲಿ ಹೂಡಿಕೆ ಯಶಸ್ವಿಯಾಗಿದೆ ಎಂದು ತೋರಿದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಒಟ್ಟು 8.3 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ಆ್ಯಪ್ನಲ್ಲಿ ಈ ಹೂಡಿಕೆಗೆ 59.4 ಕೋಟಿ ರೂಪಾಯಿ ಲಾಭವಾಗಿದೆ ಎಂದು ತೋರಿಸಲಾಗಿತ್ತು. ಆದರೆ ಇದರಲ್ಲಿ 15 ಕೋಟಿ ರೂಪಾಯಿಯನ್ನು ವಿತ್ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ಇದರಿಂದ ವಂಚನೆ ಬಗ್ಗೆ ಅನುಮಾನಗೊಂಡ ನಾಯ್ಡು, ವಂಚಕರನ್ನು ಪ್ರಶ್ನಿಸಿದಾಗ, ಹಣ ವಾಪಸ್ ಪಡೆಯಲು ಶೇಕಡಾ 18ರಷ್ಟು ಸೇವಾ ಶುಲ್ಕವಾಗಿ 2.70 ಕೋಟಿ ರೂಪಾಯಿ ಪಾವತಿಸಬೇಕೆಂದು ಅವರು ಬೇಡಿಕೆ ಇಟ್ಟರು. ಇದರಿಂದ ವಂಚನೆ ಸ್ಪಷ್ಟವಾದ ಹಿನ್ನೆಲೆಯಲ್ಲಿ ರಾಜೇಂದ್ರ ನಾಯ್ಡು ತಕ್ಷಣವೇ 1930 ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದರು.
ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಖಾತೆಯಲ್ಲಿ ಇದ್ದ ಸುಮಾರು 61 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಸೈಬರ್ ವಂಚಕರ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಷೇರು ಹೂಡಿಕೆ, ಹೆಚ್ಚಿನ ಲಾಭದ ಭರವಸೆ ನೀಡುವ ಕರೆಗಳು ಮತ್ತು ಅಪರಿಚಿತ ಆ್ಯಪ್ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.