ನವದೆಹಲಿ, ಡಿ. 15 (DaijiworldNews/AA): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟಿಸ್ಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿ ಪೊಲೀಸರ ನೋಟಿಸ್ಗೆ ಉತ್ತರ ನೀಡುವ ಬಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸೋಮವಾರ ದೆಹಲಿ ಪೊಲೀಸರಿಗೆ ಉತ್ತರ ನೀಡಲು ನಿರ್ಧರಿಸಿದ್ದೆ. ಆದರೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ವಿಶೇಷ ವಿಮಾನದಲ್ಲಿ ದಾವಣಗೆರೆಗೆ ತೆರಳುತ್ತಿದ್ದು, ಅಧಿವೇಶನ ಮುಗಿದ ಬಳಿಕ ಉತ್ತರಿಸಲು ಕಾಲಾವಕಾಶ ಕೇಳುತ್ತೇನೆ" ಎಂದು ಹೇಳಿದರು.
"ಪೊಲೀಸರು ನೀಡಿರುವ ನೋಟಿಸ್ಗೆ ನನ್ನ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇನೆ. ಏಕೆಂದರೆ ಅವರು ಎಫ್ಐಆರ್ ಪ್ರತಿಯನ್ನು ಲಗತ್ತಿಸಿಲ್ಲ. ಇ.ಡಿ.ಗೆ ಈಗಾಗಲೇ ಉತ್ತರ ನೀಡಿದ್ದೇವೆ. ಎಫ್ಐಆರ್ ಪ್ರತಿಯಲ್ಲಿ ಏನಿದೆ ಎಂದು ಓದಿಲ್ಲ. ಕೇವಲ ನೋಟಿಸ್ ಮಾತ್ರ ನೀಡಿದ್ದಾರೆ. ಎಫ್ಐಆರ್ ಪ್ರತಿ ನೀಡಿ ಎಂದು ಕೇಳುತ್ತೇನೆ" ಎಂದರು.