ಬೆಳಗಾವಿ, ಡಿ. 08 (DaijiworldNews/TA): ರಾಜ್ಯದಲ್ಲಿ ಅಬಕಾರಿ ಆದಾಯ ಕುಸಿಯುತ್ತಿರುವ ಸಂದರ್ಭದಲ್ಲಿ, ಬಿಜೆಪಿ ಎಂಎಲ್ಸಿ ರವಿಕುಮಾರ್ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನ ಸರ್ಕಾರಕ್ಕೆ ನೀಡಿದ 'ಖತರ್ನಾಕ್ ಐಡಿಯಾ' ಈಗ ವಿವಾದಕ್ಕೆ ಕಾರಣವಾಗಿದೆ. ಮದ್ಯಪಾನದಿಂದ ಲಿವರ್ ಹಾನಿಗೊಳಗಾಗುವ ಕುಡುಕರ ಚಿಕಿತ್ಸೆಗೆ ಸರ್ಕಾರ ಗ್ಯಾರಂಟಿ ನೀಡಿದರೆ, ಅವರು “ಇನ್ನಷ್ಟು ಮದ್ಯ ಕುಡಿಯಲು ಧೈರ್ಯ ಹೊಂದುತ್ತಾರೆ ಮತ್ತು ಅಬಕಾರಿ ಆದಾಯವೂ ಹೆಚ್ಚಾಗುತ್ತದೆ” ಎಂದು ಅವರು ಹೇಳಿದರು.

ನಿಯಮ 330ರ ಅಡಿಯಲ್ಲಿ ಮಾತನಾಡಿದ ರವಿಕುಮಾರ್, ಮದ್ಯಪಾನದಿಂದ 3% ಮಂದಿ ಗಂಭೀರ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ಉಲ್ಲೇಖಿಸಿದರು. ಸರ್ಕಾರ ವರ್ಷಕ್ಕೆ 43 ಸಾವಿರ ಕೋಟಿ ಅಬಕಾರಿ ಆದಾಯದ ಗುರಿ ಇಟ್ಟುಕೊಂಡಿದ್ದರೂ, ಈಗಾಗಲೇ 20% ಕುಸಿತ ದಾಖಲಾಗಿದೆ. “ಮದ್ಯಪಾನದ ಪರಿಣಾಮ ಜಾಂಡಿಸ್ ಮತ್ತು ಲಿವರ್ ಚಿಕಿತ್ಸೆಗಾಗುವ ವೆಚ್ಚ ಹೆಚ್ಚಿನದು. ಮದ್ಯಪ್ರಿಯರ ರೋಗ ಚಿಕಿತ್ಸೆಗೆ ಅಬಕಾರಿ ಆದಾಯದ ಕನಿಷ್ಠ 20% ಹಣ ಮೀಸಲಿಡಬೇಕು. ಸರ್ಕಾರ ಚಿಕಿತ್ಸೆ ವೆಚ್ಚ ಭರಿಸಿದರೆ, ಜನರು ಹೆದರದೆ ಕುಡಿಯುತ್ತಾರೆ, ಆದಾಯವೂ ಹೆಚ್ಚುತ್ತದೆ” ಎಂಬ ವಿವಾದಾತ್ಮಕ ಸಲಹೆಯನ್ನು ಅವರು ಮಂಡಿಸಿದರು.
“ಮದ್ಯಪಾನಿಗಳಿಂದಲೇ ಸರ್ಕಾರಕ್ಕೆ ಗ್ಯಾರಂಟಿ ಬರುತ್ತಿದೆ. ದೇಶದಲ್ಲಿ ಐದು ಮಂದಿಯಲ್ಲಿ ಒಬ್ಬರು ಮದ್ಯ ಸೇವನೆಯಿಂದ ಜಾಂಡಿಸ್ಗೆ ಬಲಿಯಾಗುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಕರ್ತವ್ಯ” ಎಂದರು. ಎಂಎಲ್ಸಿ ಅವರ ಈ ಸಲಹೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಲಿಖಿತ ಉತ್ತರ ನೀಡುತ್ತಾ, ಅಬಕಾರಿ ಆದಾಯವನ್ನು ಪ್ರತ್ಯೇಕವಾಗಿ ಮದ್ಯಪಾನಿಗಳ ಆರೋಗ್ಯ ಚಿಕಿತ್ಸೆಗೆ ಮೀಸಲಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
“ಅಬಕಾರಿ ಆದಾಯವನ್ನು ರಾಜ್ಯದ ಬಜೆಟ್ ಕಾರ್ಯಕ್ರಮಗಳಿಗೆ ವರ್ಗಾಯಿಸಲಾಗುತ್ತದೆ. ಬೇಡಿಕೆಯಂತೆ ಮದ್ಯಪಾನಿಗಳಿಗೆ ವಿಶೇಷ ಅನುದಾನ ನೀಡುವುದು ಅಸಾಧ್ಯ. ಆರೋಗ್ಯ ಸೇವೆಗಳಿಗೆ ಈಗಾಗಲೇ ನ್ಯಾಷನಲ್ ಹೆಲ್ತ್ ಮಿಷನ್ ಮತ್ತು ಜನ ಆರೋಗ್ಯ ಯೋಜನೆಗಳ ಮೂಲಕ ಅನುದಾನ ಒದಗಿಸಲಾಗುತ್ತಿದೆ” ಎಂದು ಸಚಿವರು ತಿಳಿಸಿದರು. ವಿಧಾನಪರಿಷತ್ನಲ್ಲಿ ರವಿಕುಮಾರ್ ನೀಡಿದ ಸಲಹೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ಆದಾಯ ಹೆಚ್ಚಿಸಲು “ಕುಡುಕರ ಲಿವರ್ಗೆ ಗ್ಯಾರಂಟಿ” ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದೆ.