ಪಂಜಾಬ್, ಡಿ. 08 (DaijiworldNews/TA): “ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಗಲು 500 ಕೋಟಿ ರೂಪಾಯಿ ತುಂಬಿದ ಸೂಟ್ಕೇಸ್ ನೀಡಬೇಕು” ಎಂಬ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಅವರ ಹೇಳಿಕೆ ಪಂಜಾಬ್ ಕಾಂಗ್ರೆಸ್ನಲ್ಲಿ ಭಾರೀ ರಾಜಕೀಯ ಸಂಚಲನ ಉಂಟುಮಾಡಿದೆ. ವಿವಾದಾತ್ಮಕ ಹೇಳಿಕೆಯ ಪರಿಣಾಮವಾಗಿ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲೂ ಗಂಭೀರ ಟೀಕೆಗಳನ್ನು ಎದುರಿಸುತ್ತಿದ್ದು, ಪಕ್ಷದ ಹೀನಾಯ ಹಿನ್ನಡೆಗೂ ಇದು ಕಾರಣವಾಗಿದೆ.

ಈ ಹೇಳಿಕೆಯಿಂದ ಉಂಟಾದ ಮುಜುಗರದ ಹಿನ್ನೆಲೆಯಲ್ಲಿ ಪಂಜಾಬ್ ಕಾಂಗ್ರೆಸ್ ಶಿಸ್ತು ಸಮಿತಿಯು ತುರ್ತಾಗಿ ಸಭೆ ಕರೆದು, ನವಜೋತ್ ಕೌರ್ ಸಿಧು ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡುವ ಆದೇಶ ಹೊರಡಿಸಿದೆ. ಮಾಜಿ ಸಚಿವೆಯಾಗಿದ್ದ ಕೌರ್, ತಮ್ಮ ಹೇಳಿಕೆಯಿಂದ ಪಕ್ಷದ ಚಿತ್ರಕ್ಕೆ ಹಾನಿ ತಂದಿದ್ದಾರೆಂದು ಶಿಸ್ತು ಸಮಿತಿ ಸ್ಪಷ್ಟಪಡಿಸಿದೆ.
ಪಂಜಾಬ್ ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನವಜೋತ್ ಕೌರ್ ಸಿಧು, ತಮ್ಮ ಪತಿ ನವಜೋತ್ ಸಿಂಗ್ ಸಿಧು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, “ನಮ್ಮ ಬಳಿ 500 ಕೋಟಿ ರೂಪಾಯಿ ಇಲ್ಲ. ಯಾರೂ ನಮ್ಮಿಂದ ಹಣ ಕೇಳಿಲ್ಲ. ಆದರೆ ನಿಜವಾಗಿ ಮುಖ್ಯಮಂತ್ರಿಯಾಗುವುದಕ್ಕೆ 500 ಕೋಟಿ ರೂಪಾಯಿ ಕೊಡುವ ಸಾಮರ್ಥ್ಯ ಇರಬೇಕು” ಎಂದು ಹೇಳಿದ್ದಾರೆ.
ಅವರು ಮತ್ತಷ್ಟು ಹೇಳುವಾಗ, “ಕಾಂಗ್ರೆಸ್ನಲ್ಲಿ ಕನಿಷ್ಠ ಐದು ಪ್ರಮುಖ ನಾಯಕರು ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅವರು ಸಿಧು ಬೆಳೆಯದಂತೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಪತಿ ಪುನಃ ಸಕ್ರಿಯ ರಾಜಕಾರಣಕ್ಕೆ ಮರಳಬೇಕಾದರೆ, ಅವರನ್ನು ಅಧಿಕೃತವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕಿದೆ” ಎಂದರು.
ನವಜೋತ್ ಕೌರ್ ಅವರ ಹೇಳಿಕೆಯ ನಂತರ ಬಿಜೆಪಿ ತಕ್ಷಣವೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕ ಸುಧಾಂಶು ತ್ರಿವೇದಿ, “ಕಾಂಗ್ರೆಸ್ ಭ್ರಷ್ಟಾಚಾರದ ಗೂಡಾಗಿದೆ ಎಂಬುದನ್ನು ಅವರದೇ ನಾಯಕರು ಬಹಿರಂಗಪಡಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ. ನವಜೋತ್ ಕೌರ್ ಸಿಧು ಅವರ ವಿವಾದಾತ್ಮಕ ಹೇಳಿಕೆ ಮತ್ತಷ್ಟು ರಾಜಕೀಯ ಬಿರುಕುಗಳಿಗೆ ಕಾರಣವಾಗುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಪಂಜಾಬ್ ಕಾಂಗ್ರೆಸ್ ಎದುರಿಸಬೇಕಾದ ಸವಾಲುಗಳು ಹೆಚ್ಚಾಗಲಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.