ನವದೆಹಲಿ, ಡಿ. 08 (DaijiworldNews/TA): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ವೇಳೆ, ಭಾರತ ಮತ್ತು ರಷ್ಯಾ ನಡುವಿನ ಚೆನ್ನೈ-ವ್ಲಾಡಿವೋಸ್ಟಾಕ್ ಪೂರ್ವ ಸಮುದ್ರ ಕಾರಿಡಾರ್ ಕುರಿತು ಮಹತ್ವದ ಪ್ರಗತಿ ಕಂಡಿದೆ.

ಸುಮಾರು 10,370 ಕಿಲೋಮೀಟರ್ ಉದ್ದದ ಈ ಹೊಸ ಮಾರ್ಗ ಚಾಲನೆಯಾಯಿತಾದರೆ, ಭಾರತದಿಂದ ರಷ್ಯಾಗೆ ಹಡಗುಗಳು ಕೇವಲ 24 ದಿನಗಳಲ್ಲಿ ತಲುಪಲು ಸಾಧ್ಯವಾಗಲಿದೆ. ಪ್ರಸ್ತುತ, ಸುಯೆಜ್ ಕಾಲುವೆ ಮೂಲಕ ಸೇಂಟ್ ಪೀಟರ್ಸ್ಬರ್ಗ್ಗೆ ಹೋಗುವ ಸಾಂಪ್ರದಾಯಿಕ ಮಾರ್ಗವು 16,060 ಕಿ.ಮೀ ದೂರವಿದ್ದು, ದಾಟಲು 40 ದಿನಗಳ ಕಾಲ ಹಿಡಿಯುತ್ತದೆ. ಹೊಸ ಕಾರಿಡಾರ್ 5,700 ಕಿ.ಮೀ ಕಡಿಮೆ ದೂರವಿದ್ದು, ಸುಮಾರು 16 ದಿನಗಳ ಸಮಯದ ಉಳಿತಾಯವನ್ನು ಮಾಡಲಿದೆ.
ಡಿಸೆಂಬರ್ 5ರಂದು ನಡೆದ ಮೋದಿ-ಪುಟಿನ್ ಮಾತುಕತೆ ವೇಳೆ ಎರಡೂ ದೇಶಗಳು ಶೀಘ್ರದಲ್ಲೇ ಈ ಮಾರ್ಗವನ್ನು ತೆರೆಯಲು ಒಪ್ಪಿಕೊಂಡಿದ್ದು, ಜಾಗತಿಕ ಉದ್ವಿಗ್ನತೆಗಳ ನಡುವೆಯೂ ಇದು ಸುರಕ್ಷಿತ ಮತ್ತು ವಿಶ್ವಾಸಾರ್ಹ ವ್ಯಾಪಾರ ಮಾರ್ಗವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಈ ಭೇಟಿ ಭಾರತೀಯ-ರಷ್ಯಾ ವ್ಯಾಪಾರವನ್ನು 2030ರೊಳಗೆ 100 ಬಿಲಿಯನ್ ಡಾಲರ್ಗೆ ಏರಿಸುವ ಗುರಿಯತ್ತ ಪ್ರಮುಖ ಹೆಜ್ಜೆ ಹಾಕಿದಂತಾಗಿದೆ. ಪ್ರಸ್ತುತ ಎರಡೂ ದೇಶಗಳ ವ್ಯಾಪಾರ ಸುಮಾರು 60 ಬಿಲಿಯನ್ ಡಾಲರ್ಗಳಷ್ಟಿದೆ.
ಹೊಸ ಸಮುದ್ರ ಮಾರ್ಗ ಆರಂಭವಾದ ನಂತರ ಭಾರತಕ್ಕೆ ರಷ್ಯಾದಿಂದ ಕಚ್ಚಾ ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲು, ರಸಗೊಬ್ಬರ, ಲೋಹಗಳು ಹಾಗೂ ಇತರ ಕೈಗಾರಿಕಾ ಕಚ್ಚಾ ವಸ್ತುಗಳನ್ನು ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ ಭಾರತದಿಂದ ರಷ್ಯಾಗೆ ಯಂತ್ರೋಪಕರಣಗಳು, ಎಂಜಿನಿಯರಿಂಗ್ ಸರಕುಗಳು, ಆಟೋ ಬಿಡಿಭಾಗಗಳು, ಜವಳಿ, ಸಮುದ್ರ ಉತ್ಪನ್ನಗಳು ಮತ್ತು ಕೃಷಿ ವಸ್ತುಗಳನ್ನು ರಫ್ತು ಮಾಡುವ ಅವಕಾಶವೂ ಹೆಚ್ಚಲಿದೆ. ಈ ಮಾರ್ಗದ ಕಾರ್ಯಾರಂಭವು ಭಾರತ-ರಷ್ಯಾ ಆರ್ಥಿಕ ಸಹಕಾರಕ್ಕೆ ಹೊಸ ಬಲ ತುಂಬುವುದಾಗಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಳಸಲಾಗುವ ಸ್ಯೂಯೆಜ್ ಕಾಲುವೆಯ ಮಾರ್ಗವು ಗಾಜಾ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಅಪಾಯಕ್ಕೆ ಗುರಿಯಾಗಿದ್ದು, ಉಕ್ರೇನ್ ಯುದ್ಧದ ಪರಿಣಾಮವಾಗಿ ಯುರೋಪ್ ಮೂಲಕ ರಷ್ಯಾಗೆ ಸಾಗುವ ಸಾಂಪ್ರದಾಯಿಕ ಸಮುದ್ರ ಮಾರ್ಗವೂ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಹೊಸ ಸಮುದ್ರ ಕಾರಿಡಾರ್ ಭಾರತಕ್ಕೆ ತ್ವರಿತ ಮತ್ತು ಸುರಕ್ಷಿತ ಪರ್ಯಾಯವನ್ನಾಗಿ ಪರಿಣಮಿಸಲಿದೆ. ಇನ್ನೊಂದೆಡೆ, ಇರಾನ್ ಮತ್ತು ಅಜೆರ್ಬೈಜಾನ್ ಮೂಲಕ ಸಾಗುವ 7,200 ಕಿ.ಮೀ ಉದ್ದದ ಉತ್ತರ-ದಕ್ಷಿಣ ವಾಣಿಜ್ಯ ಕಾರಿಡಾರ್ ಕಡಿಮೆ ವೆಚ್ಚದ ಮಾರ್ಗವಾದರೂ, ಇರಾನ್ ಉದ್ವಿಗ್ನತೆ ಇದರ ವಿಶ್ವಾಸಾರ್ಹತೆಯನ್ನು ಪ್ರಶ್ನೆಗೆ ಒಳಪಡಿಸಿದೆ.
ಪುಟಿನ್ ಅವರ ಭೇಟಿಯ ಸಮಯದಲ್ಲಿ ಮಾನವಶಕ್ತಿ ಚಲನಶೀಲತೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಆಹಾರ ಸುರಕ್ಷತೆ, ಸಾಗಣೆ-ಬಂದರು, ಹಡಗು ನಿರ್ಮಾಣ, ರಸಗೊಬ್ಬರ ಪೂರೈಕೆ ಹಾಗೂ ಪರಮಾಣು ಶಕ್ತಿಯಂತಹ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಬಗ್ಗೆ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿವೆ. ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳು, ವೈದ್ಯರು ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಒತ್ತು ನೀಡಲಾಗಿದ್ದು, ಆಹಾರ ಗುಣಮಟ್ಟ ಖಾತರಿಗಾಗಿ ಭಾರತ ಮತ್ತು ರಷ್ಯಾ ಸಂಸ್ಥೆಗಳ ನಡುವೆ ಸಮನ್ವಯ ಹೆಚ್ಚಲು ಸಹ ಒಪ್ಪಿಗೆ ದೊರೆತಿದೆ.
ಸಾಗಣೆ ಮತ್ತು ಹಡಗು ನಿರ್ಮಾಣದಲ್ಲಿ, ವಿಶೇಷವಾಗಿ ಆರ್ಕ್ಟಿಕ್ ಪ್ರದೇಶಕ್ಕೆ ಸೂಕ್ತವಾದ ಹಡಗುಗಳ ಸಂಶೋಧನೆ ಮತ್ತು ಜಂಟಿ ಉತ್ಪಾದನೆಗೆ ಮಾರ್ಗ ತೆರೆದುಕೊಂಡಿದೆ. ರಸಗೊಬ್ಬರ ಪೂರೈಕೆಯಲ್ಲಿ ಯೂರಿಯಾ, ಪೊಟ್ಯಾಶ್ ಮತ್ತು ಫಾಸ್ಫೇಟ್ನ ನಿಯಮಿತ ಪೂರೈಕೆಗೆ ಒಪ್ಪಂದ ಕಾದಿದ್ದು, ಪರಮಾಣು ಶಕ್ತಿ ಸಹಕಾರದಲ್ಲಿ ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳ ಸಂಶೋಧನೆಗೂ ಒಪ್ಪಿಗೆ ನೀಡಲಾಗಿದೆ. ಪುಟಿನ್-ಮೋದಿ ಮಾತುಕತೆಯ ಈ ಹೊಸ ಹಂತ, ಭಾರತ-ರಷ್ಯಾ ದ್ವಿಪಕ್ಷೀಯ ಸಂಬಂಧಗಳನ್ನು ಮುಂದಿನ ದಶಕದಲ್ಲಿ ಹೊಸ ಮಟ್ಟಕ್ಕೇರಿಸಬಹುದಾದ ಪ್ರಮುಖ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.