ಚಂಡೀಗಢ, ಡಿ. 08 (DaijiworldNews/TA): ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಂತೆಯೇ, ಪಂಜಾಬ್ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಮತ್ತು ಒಳಜಗಳ ಮತ್ತಷ್ಟು ಮೂರ್ತಿಯಾಗಿ ಹೊರಬಿದ್ದಿದೆ. ಕಾಂಗ್ರೆಸ್ನ ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಅವರು “ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿ ನೀಡಬೇಕು” ಎಂದು ಆರೋಪಿಸಿ, ಪಕ್ಷದ ಹೈಕಮಾಂಡ್ ಮೇಲೆಯೇ ಸಿಡಿದೆದ್ದಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನವಜೋತ್ ಕೌರ್ ಸಿಧು ಅವರು, “ಕಾಂಗ್ರೆಸ್ ನನ್ನ ಪತಿ ನವಜೋತ್ ಸಿಂಗ್ ಸಿಧು ಅವರನ್ನು ಅಧಿಕೃತವಾಗಿ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಮಾತ್ರವೇ ನಾನು ಮರು ರಾಜಕೀಯಕ್ಕೆ ಬರುತ್ತೇನೆ” ಎಂದು ಹೇಳಿದ್ದಾರೆ. ಅವರು ಮುಂದುವರೆದು, “500 ಕೋಟಿ ರೂಪಾಯಿ ಇರುವವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗುತ್ತದೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ಯಾರೂ ನನ್ನಿಂದ ಹಣ ಕೇಳಿಲ್ಲ, ಆದರೆ ಸಿಸ್ಟಂ ಹಾಗೆಯೇ ಕಾರ್ಯನಿರ್ವಹಿಸುತ್ತದೆ” ಎಂದು ಗಂಭೀರ ಆರೋಪ ಮಾಡಿದರು.
ಸಿಧು ಅವರ ಆರೋಪಕ್ಕೆ ಬಿಜೆಪಿ ತಕ್ಷಣ ಪ್ರತಿಕ್ರಿಯಿಸಿದ್ದು, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು, “ಛತ್ತೀಸ್ಗಢ, ತೆಲಂಗಾಣ, ಕರ್ನಾಟಕ - ಎಲ್ಲೆಡೆ ಇದೇ ಭ್ರಷ್ಟಾಚಾರದ ಆರೋಪಗಳು ಕಾಂಗ್ರೆಸ್ನಲ್ಲಿ ಕೇಳಿಬಂದಿವೆ. ಹಣ ಮತ್ತು ಸೂಟ್ಕೇಸ್ ರಾಜಕಾರಣಕ್ಕೆ ಗಾಂಧಿ ಕುಟುಂಬ ಉತ್ತರಿಸಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಸುಖಜಿಂದರ್ ಸಿಂಗ್ ರಾಂಧವ ಅವರು ಸಿಧು ವಿರುದ್ಧ ಪ್ರತ್ಯುತ್ತರ ನೀಡಿ, “ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದಾಗ, ಸಿಧು ಕುಟುಂಬ ಯಾರಿಗೆ ಸೂಟ್ಕೇಸ್ ಕೊಟ್ಟರು? ಅದರ ಬೆಲೆ ಎಷ್ಟು?” ಎಂದು ಪ್ರಶ್ನಿಸಿದ್ದಾರೆ. ಅವರ ಪ್ರಕಾರ, ಸಿಧು ಕುಟುಂಬ ಕಾಂಗ್ರೆಸ್ ಸೇರಿದಾಗ ಅನುಸರಿಸಿದ ಧ್ಯೇಯ ಈಗ ಬಯಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಪಂಜಾಬ್ ಕಾಂಗ್ರೆಸ್ನಲ್ಲಿ ಈ ವಿವಾದ ಹೊಸದೇನಲ್ಲ. 2022ರ ಚುನಾವಣೆಯ ವೇಳೆ ನವಜೋತ್ ಸಿಂಗ್ ಸಿಧು ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸದೆ, ಚರಣ್ಜಿತ್ ಸಿಂಗ್ ಚನ್ನಿಯನ್ನು ಮುಂದಿರಿಸಿದದ್ದು ಪಕ್ಷದೊಳಗಿನ ದೊಡ್ಡ ತಿರುವಾಗಿತ್ತು. ಈ ನಿರ್ಧಾರವೇ ಸಿಧು ರಾಜೀನಾಮೆಗೆ ಕಾರಣವಾಗಿತ್ತು.