ಹೈದರಾಬಾದ್, ಡಿ. 08 (DaijiworldNews/TA): ಹೈದರಾಬಾದ್ನ ಯುಎಸ್ ಕಾನ್ಸುಲೇಟ್ಗೆ ಹೋಗುವ ರಸ್ತೆಗಳಿಗೆ ಅಮೆರಿಕದ 45 ಮತ್ತು 47ನೇ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಇಡುವ ಬಗ್ಗೆ ತೆಲಂಗಾಣ ಸರ್ಕಾರ ಪ್ರಸ್ತಾಪಿಸಿದ್ದು, ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸರ್ಕಾರ ಈ ಹೈಪ್ರೊಫೈಲ್ ರಸ್ತೆಗೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಡಲು ಯೋಜಿಸಿದೆ.

ಈ ಕುರಿತು ರಾಜ್ಯ ಸರ್ಕಾರವು ಶೀಘ್ರದಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹಾಗೂ ಯುಎಸ್ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಮತ್ತು ಅನುಮೋದನೆಗಾಗಿ ಅಧಿಕೃತ ಮನವಿ ಸಲ್ಲಿಸಲು ತಯಾರಾಗಿದೆ. ತೆಲಂಗಾಣ ಸರ್ಕಾರ ಮತ್ತೊಂದು ಮಹತ್ವದ ಪ್ರಸ್ತಾಪವಾಗಿ, ರವಿರಿಯಾಲದಲ್ಲಿರುವ ಔಟರ್ ರಿಂಗ್ ರಸ್ತೆ ಮತ್ತು ಮುಂಬರುವ ರೇಡಿಯಲ್ ರಿಂಗ್ ರಸ್ತೆಯನ್ನು ಸಂಪರ್ಕಿಸುವ ಗ್ರೀನ್ಫೀಲ್ಡ್ ರೇಡಿಯಲ್ ರಸ್ತೆಗೆ ದಿವಂಗತ ಉದ್ಯಮಿ ರತನ್ ಟಾಟಾ ಅವರ ಹೆಸರಿಡಲು ನಿರ್ಧರಿಸಿದೆ.
ಇದೇ ರೀತಿ, ಹೈದರಾಬಾದ್ನ ಇನ್ನೊಂದು ಪ್ರಮುಖ ರಸ್ತೆಗೆ ಗೂಗಲ್ ಹೆಸರಿಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ‘ವಿಪ್ರೋ’, ‘ಮೈಕ್ರೋಸಾಫ್ಟ್’ ಸೇರಿದಂತೆ ಇತರ ಟೆಕ್ ದೈತ್ಯ ಸಂಸ್ಥೆಗಳ ಹೆಸರನ್ನೂ ರಸ್ತೆಗಳಿಗೆ ಇಡುವ ಕುರಿತು ಸರ್ಕಾರ ಆಲೋಚಿಸಿದೆ. ಈ ಘೋಷಣೆ ಭಾರತ್ ಫ್ಯೂಚರ್ ಸಿಟಿಯಲ್ಲಿ, ತೆಲಂಗಾಣ ರೈಸಿಂಗ್ ಗ್ಲೋಬಲ್ ಶೃಂಗಸಭೆ 2025ರ ಮುನ್ನಾದಿನದಂದು ಮಾಡಲಾಯಿತು. ನವೆಂಬರ್ನಲ್ಲಿ ದೆಹಲಿಯಲ್ಲಿ ನಡೆದ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ ಸಭೆಯಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹೈದರಾಬಾದ್ನ ಪ್ರಮುಖ ರಸ್ತೆಗೆ ಜಾಗತಿಕ ಕಂಪನಿಗಳ ಹೆಸರಿಡುವ ಕಲ್ಪನೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಈ ಪ್ರಸ್ತಾಪದ ವಿರುದ್ಧ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಸರ್ಕಾರವನ್ನು ಟೀಕಿಸಿ, “ಕಾಂಗ್ರೆಸ್ ಸರ್ಕಾರ ಹೆಸರು ಬದಲಿಸಲು ಇಷ್ಟೊಂದು ಆಸಕ್ತಿಯಿದ್ದರೆ, ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವ ಬಗ್ಗೆ ಯೋಚಿಸಲಿ,” ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, “ರೇವಂತ್ ರೆಡ್ಡಿ ಯಾರ ನಡೆನುಡಿಯನ್ನೂ ಅನುಸರಿಸುತ್ತಾರೋ, ಅವರ ಹೆಸರನ್ನೇ ರಸ್ತೆಗಳಿಗೆ ಇಡಲು ಪ್ರಯತ್ನಿಸುತ್ತಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ.