ಬೆಳಗಾವಿ, ಡಿ. 08 (DaijiworldNews/AK): ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ 5 ಕೆಜಿ ಅಕ್ಕಿಗೆ ಬದಲಾಗಿ ಜನವರಿಯಿಂದ ಇಂದಿರಾ ಕಿಟ್ ಕೊಡೋದಾಗಿ ಆಹಾರ ಸಚಿವ ಮುನಿಯಪ್ಪ ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ ರವಿ ಕೇಳಿದ ಪ್ರಶ್ನೆಗೆ , ಬಿಪಿಎಲ್ ಕಾರ್ಡ್ದಾರರಿಗೆ ಕೊಡುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಂಗ್ರಹ ಮಾಡಲಾಗ್ತಿದೆ. ಈ ಅಕ್ಕಿ ಹೊರ ದೇಶಕ್ಕೆ, ರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ರಾಜ್ಯ ವ್ಯಾಪಿ ಈ ಅಕ್ರಮ ಆಗುತ್ತಿದೆ. ಸಿಂಗಾಪುರದಲ್ಲಿ, ದುಬೈನಲ್ಲಿ ಇದೇ ಅಕ್ಕಿ ಪಾಲಿಶ್ ಮಾಡಿ ಮಾರಾಟ ಮಾಡ್ತಿದ್ದಾರೆ. ಬಡವರ ಅಕ್ಕಿ ಬಡವರಿಗೆ ಸೇರುತ್ತಿಲ್ಲ. ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಅಕ್ರಮ ಆಗಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಅಕ್ರಮ ಅಕ್ಕಿ ಸಾಗಾಟ ಪ್ರಕರಣ SIT ರಚನೆ ಮಾಡಬೇಕು ಅಂತ ಒತ್ತಾಯಿದರು.
ಇದಕ್ಕೆ ಸಚಿವ ಮುನಿಯಪ್ಪ ಉತ್ತರ ನೀಡಿ, ಅನ್ನಭಾಗ್ಯ ಅಕ್ಕಿ ಹೊರ ದೇಶ, ರಾಜ್ಯಕ್ಕೆ ಸಾಗಾಟ ಮಾಡ್ತಿರೋದು ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಸಿದಂತೆ ಪ್ರಕರಣ ದಾಖಲಾಗಿದೆ. 2025 ರಲ್ಲಿ ಸುಮಾರು 485 ಕೇಸ್ ದಾಖಲು ಮಾಡಲಾಗಿದೆ. 29,603 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಕೊಪ್ಪಳ ಕೇಸ್ ಸಿಐಡಿಗೆ ವಹಿಸಲಾಗಿದೆ. ಬಾಗಲಕೋಟೆ ಕೇಸ್ ತನಿಖೆ ಮಾಡಲಾಗುತ್ತಿದೆ.
ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ 10 ಕೆಜಿ ಅಕ್ಕಿ ಕೊಡ್ತಾ ಇದ್ದೇವೆ. ಈಗ ಇಂದಿರಾ ಕಿಟ್ ಕೊಡುವ ನಿರ್ಧಾರ ಮಾಡಲಾಗಿದೆ. ಜನವರಿಯಲ್ಲಿ ಇಂದಿರಾ ಕಿಟ್ ವಿತರಣೆ ಮಾಡಲಾಗುವುದು ಎಂದರು.