ನವದೆಹಲಿ, ಡಿ. 08 (DaijiworldNews/AK):ದೇಶದಲ್ಲಿ ವಿಮಾನಯಾನ ಆರಂಭಿಸಲು ಇದು ಉತ್ತಮ ಸಮಯ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಇಂಡಿಗೋ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಆರಂಭವಾಗಬೇಕಿದೆ ಎಂದು ಹೇಳಿದರು.
ಇಂದು ಭಾರತವು ಐದು ದೊಡ್ಡ ವಿಮಾನಯಾನ ಸಂಸ್ಥೆಗಳನ್ನು ಹೊಂದಿದೆ ಮತ್ತು ಈ ಕ್ಷೇತ್ರದಲ್ಲಿ ಹೊಸ ಕಂಪನಿಗಳನ್ನು ತರಲು ಸಚಿವಾಲಯವು ಹೆಚ್ಚಿನ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು. ವಿಮಾನ ಕರ್ತವ್ಯ ಸಮಯ ಮಿತಿಗಳು ಕುರಿತು ಡಿಸೆಂಬರ್ 1 ರಂದು ಸಚಿವಾಲಯವು ಇಂಡಿಗೋ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದೆ ಎಂದು ನಾಯ್ಡು ಹೇಳಿದರು.
ವಿಮಾನಯಾನ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ಸ್ಪಷ್ಟೀಕರಣಗಳನ್ನು ನೀಡಲಾಗಿತ್ತು. ಆ ಸಮಯದಲ್ಲಿ ಕಂಪನಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿತ್ತು. ಇಂಡಿಗೋ ತಮ್ಮ ಸಿಬ್ಬಂದಿ ಪಟ್ಟಿಯನ್ನು ನಿರ್ವಹಿಸಬೇಕಾಗಿತ್ತು. ಡಿಜಿಸಿಎಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಬದಲಾಗಿ ಇಂಡಿಗೋದ ಆಂತರಿಕ ಯೋಜನಾ ವೈಫಲ್ಯದಿಂದ ಈ ಅಡಚಣೆ ಉಂಟಾಗಿದೆ. ಈ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ ಅವರು ಇಂಡಿಗೋ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.