ಬೆಂಗಳೂರು, ಡಿ. 08 (DaijiworldNews/TA) : ಶಿವಮೊಗ್ಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸಂಪ್ರದಾಯಿಕವಾಗಿ ಆಚರಿಸುವ ಹೋರಿ ಹಬ್ಬಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಜಲ್ಲಿಕಟ್ಟಿನಂತೆ ಎತ್ತುಗಳನ್ನೊಳಗೊಂಡ ಈ ಹಬ್ಬಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ವಿಧಿಸಿರುವ ಎಲ್ಲಾ ಭದ್ರತಾ ಮತ್ತು ಪ್ರಾಣಿಗಳ ರಕ್ಷಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ನ್ಯಾಯಾಲಯ ಷರತ್ತು ಹಾಕಿದೆ.

ಹಾವೇರಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ರಟ್ಟಿಹಳ್ಳಿ, ಶಿಕಾರಿಪುರ, ಆನವಟ್ಟಿ, ಶಿಗ್ಗಾವಿ, ಶಿರಸಿ, ಮುಂಡಗೋಡ, ಸವಣೂರು, ದಾವಣಗೆರೆ, ಹರಿಹರ, ಹೊನ್ನಾಳಿ, ಶಿವಮೊಗ್ಗ ಭಾಗಗಳಲ್ಲಿ ದೀಪಾವಳಿ ಸಮಯದಲ್ಲಿ ಹೋರಿ ಹಬ್ಬವನ್ನು ಆಚರಿಸುವುದು ಶತಮಾನಗಳಿಂದಲೂ ನಡೆಬಂದಿರುವ ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಡಿಸೆಂಬರ್ 5ರಂದು ನೀಡಿದ ತೀರ್ಪಿನಲ್ಲಿ, ಹೋರಿ ಹಬ್ಬ ನಡೆಸಲು ಅನುಮತಿ ಇದೆ, ಆದರೆ ಜಲ್ಲಿಕಟ್ಟಿನ ಕುರಿತು ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ನ್ಯಾ. ಎಂ. ನಾಗಪ್ರಸನ್ನ ಸೂಚಿಸಿದ್ದಾರೆ.
ನ್ಯಾಯಾಲಯ ನೀಡಿದ ಆದೇಶದಲ್ಲಿ, “ಹೋರಿ ಹಬ್ಬಕ್ಕೆ ನೀಡುವ ಅನುಮತಿ ಪ್ರಾಣಿಗಳ ಸುರಕ್ಷತೆ ಮತ್ತು ಅವರ ಬಳಕೆಯ ಕುರಿತಂತೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಷರತ್ತುಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿರಬೇಕು”, “ಯಾವುದೇ ಸಂದರ್ಭದಲ್ಲೂ ಇದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ನಿಯಮಗಳಿಗೆ ವಿರುದ್ಧವಾಗಬಾರದು” ಎಂದು ಸ್ಪಷ್ಟಪಡಿಸಲಾಗಿದೆ.
ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಬೇಕೆಂದು ಕೋರ್ಟ್ ಎಚ್ಚರಿಸಿದೆ. ಅಖಿಲ ಕರ್ನಾಟಕ ರೈತ ಜಾನಪದ ಕ್ರೀಡಾ ಹೋರಿಹಬ್ಬ ಹೋರಾಟ ಸಮಿತಿ, ಎತ್ತುಗಳು ಹಾಗೂ ಎತ್ತಿನ ಬಂಡಿಗಳೊಂದಿಗೆ ರ್ಯಾಲಿ ನಡೆಸಲು ಅನುಮತಿ ಕೇಳಿದಾಗ, ಅಧಿಕಾರಿಗಳು 2022ರ ಡಿಸೆಂಬರ್ 12ರ ಅಧಿಸೂಚನೆಯನ್ನು ಉಲ್ಲೇಖಿಸಿ, ನಿಗದಿತ ಷರತ್ತುಗಳನ್ನು ಪೂರೈಸಿದ ನಂತರ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದರು. ಇದೀಗ, ಹೈಕೋರ್ಟ್ನ ಹಸಿರು ನಿಶಾನೆಯೊಂದಿಗೆ ಹೋರಿ ಹಬ್ಬಕ್ಕೆ ಕಾನೂನುಬದ್ಧ ಮಾರ್ಗವು ಸುಗಮಗೊಂಡಿದೆ.