ನವದೆಹಲಿ, ಡಿ. 08 (DaijiworldNews/TA) : ದೇಶದಲ್ಲಿ ಪ್ರತಿದಿನ ಲಕ್ಷಾಂತರ ಮದುವೆಗಳು ನಡೆಯುತ್ತಿವೆ. ಮದುವೆಯ ದಿನಾಂಕ ನಿಗದಿಯಾದ ಕ್ಷಣದಿಂದಲೇ ಕಲ್ಯಾಣ ಮಂಟಪ ಬುಕ್ಕಿಂಗ್, ಊಟ-ಪಾನೀಯ, ಅಲಂಕಾರ ಸೇರಿದಂತೆ ಹಲವು ವೆಚ್ಚಗಳು ಕುಟುಂಬಗಳ ಮೇಲೆ ಭಾರವಾಗುತ್ತವೆ. ಸಾಮಾನ್ಯವಾಗಿ ಮದುವೆಗೆ ಕನಿಷ್ಠ ರೂ.7-8 ಲಕ್ಷರೂಪಾಯಿಗಳು ಬೇಕಾಗುತ್ತವೆ. ಆದರೆ ಅನೇಕರು ತಿಳಿಯದೇ ಇರುವ ಒಂದು ಮಹತ್ವದ ಯೋಜನೆಯಡಿ, ಮದುವೆಯಾಗುವ ಕೆಲವು ಜೋಡಿಗಳು ರೂ. 2.5 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಪಡೆಯಬಹುದು. ಈ ಯೋಜನೆಯನ್ನು 2013ರಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ್ದು, ಇಂದಿಗೂ ಮುಂದುವರಿಯುತ್ತಿದೆ.

ಈ ಯೋಜನೆ Dr. Ambedkar Scheme for Social Integration through Inter-Caste Marriages ಎಂದು ಕರೆಯಲ್ಪಡುತ್ತದೆ. ಡಾ. ಅಂಬೇಡ್ಕರ್ ಫೌಂಡೇಶನ್ ನಡೆಸುವ ಈ ಯೋಜನೆಯಡಿ, ದಲಿತ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರು ದಲಿತ ಸಮುದಾಯದ ವ್ಯಕ್ತಿಯನ್ನು ಮದುವೆಯಾದರೆ, ಆ ದಂಪತಿಗೆ ರೂ. 2.5 ಲಕ್ಷ ಸಹಾಯಧನ ಸಿಗುತ್ತದೆ. ಅಂತರ್ಜಾತಿ ವಿವಾಹವನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.
ಯಾರು ಅರ್ಹರು? : ಈ ಯೋಜನೆ ಪಡೆಯಲು ಜೋಡಿಯಲ್ಲಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿರಬೇಕು. ಮದುವೆಯನ್ನು ಹಿಂದೂ ವಿವಾಹ ಕಾಯ್ದೆ, 1955ರ ಅಡಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು. ಎರಡೂ ವ್ಯಕ್ತಿಗಳಿಗೆ ಇದು ಮೊದಲ ಮದುವೆಯಾಗಿರಬೇಕು. ಮದುವೆಯಾದ ಒಂದು ವರ್ಷದೊಳಗೆ ಡಾ. ಅಂಬೇಡ್ಕರ್ ಪ್ರತಿಷ್ಠಾನಕ್ಕೆ ಅರ್ಜಿ ಸಲ್ಲಿಸಬೇಕು.
ಹಣ ನೀಡುವ ವಿಧಾನ : ದಂಪತಿಗಳು ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಇದೇ ರೀತಿಯ ಆರ್ಥಿಕ ನೆರವನ್ನು ಈಗಾಗಲೇ ಪಡೆದಿದ್ದರೆ, ರೂ. 2.5 ಲಕ್ಷ ಮೊತ್ತವನ್ನು ರೂ. 1.5 ಲಕ್ಷಕ್ಕೆ ಕಡಿತಗೊಳಿಸಲಾಗುತ್ತದೆ. ಸಹಾಯಧನವನ್ನು ದಂಪತಿಯ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಒಟ್ಟು ಮೊತ್ತದಲ್ಲಿ ರೂ. 1 ಲಕ್ಷ ರೂ. ಎಫ್ಡಿಯಾಗಿ ಇಡಲಾಗುತ್ತಿದ್ದು, ಮೂರು ವರ್ಷಗಳ ನಂತರ ಬಡ್ಡಿರಹಿತವಾಗಿ ದಂಪತಿಗೆ ನೀಡಲಾಗುತ್ತದೆ.
ಅರ್ಜಿಯನ್ನು ಹೇಗೆ ಸಲ್ಲಿಸಬೇಕು?: ಅಂತರ್ಜಾತಿ ವಿವಾಹವಾದ ಜೋಡಿಗಳು ತಮ್ಮ ಸಂಸದ ಅಥವಾ ಶಾಸಕರ ಶಿಫಾರಸಿನೊಂದಿಗೆ ಡಾ. ಅಂಬೇಡ್ಕರ್ ಪ್ರತಿಷ್ಠಾನಕ್ಕೆ ಅರ್ಜಿ ಸಲ್ಲಿಸಬಹುದು. ಇದೇ ಅರ್ಜಿಯನ್ನು ಜಿಲ್ಲಾಡಳಿತ ಕಚೇರಿ ಅಥವಾ ರಾಜ್ಯ ಸರ್ಕಾರದ ಮೂಲಕವೂ ಸಲ್ಲಿಸಲು ಅವಕಾಶ ಇದೆ. ಯೋಜನೆಯ ಸಂಪೂರ್ಣ ವಿವರಗಳು ambedkarfoundation.nic.in ವೆಬ್ಸೈಟ್ನಲ್ಲಿ ಲಭ್ಯವಿವೆ.
ಅಂತರ್ಜಾತಿ ವಿವಾಹದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸಮಗ್ರೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಮಹತ್ವದ ಪಾತ್ರವಹಿಸುತ್ತಿದೆ.