ನವದೆಹಲಿ, ಡಿ. 08 (DaijiworldNews/AK): ದೇಶಭಕ್ತಿ ಗೀತೆ ‘ವಂದೇ ಮಾತರಂ’ನ 150 ವರ್ಷಗಳನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ವಿಶೇಷ ಚರ್ಚೆಗೆ ಚಾಲನೆ ನೀಡಲಿದ್ದಾರೆ.

1875 ರ ನವೆಂಬರ್ 7 ರಂದು ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ಈ ಗೀತೆ ಸಾಹಿತ್ಯ ನಿಯತಕಾಲಿಕೆ ಬಂಗದರ್ಶನ್ನಲ್ಲಿ ಮೊದಲು ಪ್ರಕಟವಾಯಿತು. ಈ ಹಾಡು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ, ಅದರ ಐತಿಹಾಸಿಕ ಮಹತ್ವ ಮತ್ತು ಪ್ರಸ್ತುತತೆಯನ್ನು ಪ್ರಧಾನಿ ಮೋದಿ ತಿಳಿಸಲಿದ್ದಾರೆ.
ಕಳೆದ ತಿಂಗಳು ಗೀತೆಯ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ, 1937 ರ ಫೈಜಾಬಾದ್ನಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಕಾಂಗ್ರೆಸ್ ಮೂಲ ಹಾಡಿನಿಂದ ಪ್ರಮುಖ ಚರಣಗಳನ್ನು ತೆಗೆದುಹಾಕಿದೆ ಎಂದು ಮೋದಿ ಆರೋಪಿಸಿದ್ದರು.
ರಾಜ್ಯಸಭೆಯಲ್ಲಿ ವಂದೇ ಮಾತರಂ ಕುರಿತ ಚರ್ಚೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರಾರಂಭಿಸುವ ಸಾಧ್ಯತೆಯಿದೆ. ವಂದೇ ಮಾತರಂ ಚರ್ಚೆಗೆ ಲೋಕಸಭೆಯಲ್ಲಿ 10 ಗಂಟೆಗಳನ್ನು ಮೀಸಲಿಡಲಾಗಿದೆ. ಅದರಲ್ಲಿ ಆಡಳಿತಾರೂಢ ಎನ್ಡಿಎ ಸದಸ್ಯರಿಗೆ ಮೂರು ಗಂಟೆಗಳನ್ನು ನಿಗದಿಪಡಿಸಲಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 19 ರವರೆಗೆ ನಡೆಯಲಿದೆ. ಗೀತೆಯ ಬಗ್ಗೆ ಸರ್ಕಾರದ ಮತ್ತು ವಿರೋಧ ಪಕ್ಷದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳಿವೆ. ಇದರಿಂದ ಮುಂದಿನ ದಿನಗಳಲ್ಲಿ ‘ವಂದೇ ಮಾತರಂ’ ಕುರಿತ ಚರ್ಚೆ ಗದ್ದಲ ಸೃಷ್ಟಿಸುವ ಸಾಧ್ಯತೆಯಿದೆ.