ನವದೆಹಲಿ, ಡಿ. 07 (DaijiworldNews/TA): ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಏರ್ಲೈನ್ಸ್ ಗಂಭೀರ ಕಾರ್ಯಾಚರಣಾ ಬಿಕ್ಕಟ್ಟಿನಿಂದ ಬಳಲುತ್ತಿದ್ದು, ಇದರ ಪರಿಣಾಮವಾಗಿ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅನೇಕ ವಿಮಾನಗಳು ರದ್ದಾಗಿದ್ದು, ಹಲವಾರು ವಿಮಾನಗಳು ದೀರ್ಘ ವಿಳಂಬಕ್ಕೆ ಒಳಪಟ್ಟಿವೆ. ಪೂರ್ವ ಸೂಚನೆ ಇಲ್ಲದೆ ವಿಮಾನ ರದ್ದುಪಡಿಸಿದ ಪರಿಣಾಮ ಸಾವಿರಾರು ಪ್ರಯಾಣಿಕರು ದೇಶಾದ್ಯಂತ ಏರ್ಪೋರ್ಟ್ಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ಸಂದರ್ಭಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಶನಿವಾರ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ.

ವಿಮಾನಯಾನ ಸಂಸ್ಥೆಯ ಕಾರ್ಯಾಚರಣೆಯ ಕುಸಿತಕ್ಕೆ ಸಿಇಒ ಸ್ವತಃ ಹೊಣೆಗಾರರನ್ನಾಗಿ ಮಾಡಲಾಗಿದ್ದು, ವಿಮಾನ ರದ್ದತಿಯಿಂದ ಉಂಟಾದ ವ್ಯಾಪಕ ಅಸಮಾಧಾನ ಮತ್ತು ಅಸ್ತವ್ಯಸ್ತತೆಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಲಾಗಿದೆ. ನೋಟಿಸ್ನಲ್ಲಿ, ಎಲ್ಬರ್ಸ್ ಅವರಿಗೆ 24 ಗಂಟೆಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಡಿಜಿಸಿಎ ಸೂಚಿಸಿದೆ. ಯುಕ್ತಿಯುತ ಉತ್ತರ ನೀಡದಿದ್ದಲ್ಲಿ ಸಂಸ್ಥೆ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. “ಸಂಸ್ಥೆಯ ಸಿಇಒ ಆಗಿರುವ ನಿಮಗೆ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸುವ ಜವಾಬ್ದಾರಿ ಇದೆ. ಪ್ರಯಾಣಿಕರಿಗೆ ಸಮರ್ಪಕ ಸೌಲಭ್ಯ ಒದಗಿಸಬೇಕಾದ ನಿಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದೀರಿ,” ಎಂದು DGCA ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹೊಸದಾಗಿ ಜಾರಿಗೆ ತಂದಿರುವ Flight Duty Time Limit (FDTL) ನಿಯಮಾವಳಿಗಳ ಅನುಷ್ಠಾನಕ್ಕೆ ಅಗತ್ಯ ಮೂಲಸೌಕರ್ಯವನ್ನು ಇಂಡಿಗೋ ಒದಗಿಸಲಿಲ್ಲವೆಂಬುದು ಈ ಬಿಕ್ಕಟ್ಟಿನ ಮೂಲ ಕಾರಣವೆಂದು ಡಿಜಿಸಿಎ ತನ್ನ ನೋಟಿಸ್ನಲ್ಲಿ ಸ್ಪಷ್ಟಪಡಿಸಿದೆ. ಈ ನಿರ್ವಹಣಾ ವೈಫಲ್ಯದಿಂದಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅನೇಕ ಪ್ರಯಾಣಿಕರು ಗಮ್ಯಸ್ಥಾನಕ್ಕೆ ತಲುಪಲಾಗದೆ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಇಂಡಿಗೋ ಬಿಕ್ಕಟ್ಟಿನ ಹಿನ್ನೆಲೆ ಬೇರೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಅಗತ್ಯವನ್ನು ಬಳಸಿಕೊಂಡು ಟಿಕೆಟ್ ದರಗಳನ್ನು ದ್ವಿಗುಣ ಮಾಡಿರುವ ವರದಿಗಳು ಹೊರಬಿದ್ದಿದೆ. ಈ ಅನಿಯಂತ್ರಿತ ದರ ಏರಿಕೆಗೆ ತಡೆ ಹಾಕಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, “ದೇಶದ ಸಾರ್ವಜನಿಕ ಹಿತಾಸಕ್ತಿಯನ್ನು ಮನಗಂಡು ದರ ಏರಿಕೆಗೆ ಬ್ರೇಕ್ ಹಾಕುತ್ತಿದೆ” ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಇಂಡಿಗೋದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಅಸ್ತವ್ಯಸ್ತತೆ ದೇಶದ ವಿಮಾನಯಾನ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, DGCA ಕ್ರಮ ವಹಿಸುವ ರೀತಿಯತ್ತ ಎಲ್ಲರ ಚಿತ್ತ ನೆಟ್ಟಿದೆ.