ನವದೆಹಲಿ, ಡಿ. 06 (DaijiworldNews/TA): ತೀವ್ರ ಕಾರ್ಯಾಚರಣಾ ಅಡಚಣೆಗಳಿಂದಾಗಿ ದೇಶದಾದ್ಯಂತ ಸಾವಿರಾರು ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆ, ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಏರ್ಲೈನ್ಸ್ಗೆ ಕಠಿಣ ಸೂಚನೆ ಜಾರಿ ಮಾಡಿದೆ. ರದ್ದಾದ ವಿಮಾನಗಳ ಟಿಕೆಟ್ಗಳಿಗೆ ಸಂಬಂಧಿಸಿದ ಎಲ್ಲಾ ಮರುಪಾವತಿಗಳನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ಣಗೊಳಿಸಲು ಸಚಿವಾಲಯ ಆದೇಶಿಸಿದೆ. ನಿಗದಿತ ಗಡುವಿನೊಳಗೆ ಮರುಪಾವತಿ ಮಾಡಲು ವಿಫಲವಾದರೆ ಕಠಿಣ ನಿಯಂತ್ರಣಾತ್ಮಕ ಕ್ರಮ ಜರುಗಲಿದೆ ಎಂದು ಎಚ್ಚರಿಸಿದೆ.

ಶುಕ್ರವಾರ ಮಾತ್ರವೇ ಇಂಡಿಗೋ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದರೆ, ಶನಿವಾರವೂ ಪರಿಸ್ಥಿತಿ ಮುಂದುವರಿದು, ವಿವಿಧ ವಿಮಾನ ನಿಲ್ದಾಣಗಳಲ್ಲಿ 400 ಕ್ಕೂ ಹೆಚ್ಚು ಹಾರಾಟಗಳು ಸ್ಥಗಿತಗೊಂಡಿದ್ದವು. ಪ್ರಯಾಣಿಕರ ದಟ್ಟಣೆ, ಗೊಂದಲ ಮತ್ತು ಪ್ರಯಾಣಿಕರ ದಟ್ಟಣೆಯ ಸಾಲುಗಳಿಂದ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಉಂಟಾಗಿತ್ತು.
ಇಂಡಿಗೋಗೆ ಸರ್ಕಾರದ ಹೊಸ ನಿರ್ದೇಶನಗಳು:
ಪ್ರಯಾಣಿಕರ ನೆರವಿಗಾಗಿ ವಿಶೇಷ ಬೆಂಬಲ ಮತ್ತು ಮರುಪಾವತಿ ಕೇಂದ್ರಗಳನ್ನು ಸ್ಥಾಪಿಸಬೇಕು.
ತೊಂದರೆಗೊಳಗಾದ ಪ್ರಯಾಣಿಕರನ್ನು ಸ್ವತಃ ಸಂಪರ್ಕಿಸಿ, ಮರುಪಾವತಿ ಅಥವಾ ಪರ್ಯಾಯ ವಿಮಾನ ವ್ಯವಸ್ಥೆ ಮಾಡಬೇಕು.
ಸಮಸ್ಯೆ ಸಂಪೂರ್ಣ ಪರಿಹಾರವಾಗುವವರೆಗೆ ಸ್ವಯಂಚಾಲಿತ ಮರುಪಾವತಿ ವ್ಯವಸ್ಥೆ ಸಕ್ರಿಯವಾಗಿರಬೇಕು.
ರದ್ದತಿ/ವಿಳಂಬದಿಂದ ಬೇರ್ಪಟ್ಟ ಲಗೇಜ್ಗಳನ್ನು 48 ಗಂಟೆಗಳೊಳಗೆ ಪ್ರಯಾಣಿಕರಿಗೆ ತಲುಪಿಸಬೇಕು. ಪ್ರಯಾಣಿಕರ ಹಕ್ಕುಗಳ ನಿಯಮಗಳ ಪ್ರಕಾರ ಪರಿಹಾರ ನೀಡಲು ಸಿದ್ಧರಾಗಿರಬೇಕು.
ಇದೇ ವೇಳೆ, ಸರ್ಕಾರವು ಹೊಸ ವಿಮಾನ ಸುಂಕ ನಿಯಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಪ್ರವಾಸಿಗರ ಮೇಲೆ ಹೆಚ್ಚಿನ ಭಾರ ಹೇರದಂತೆ ಕ್ರಮ ಕೈಗೊಳ್ಳಲಾಗಿದೆ.