ಬೆಂಗಳೂರು, ಡಿ. 06 (DaijiworldNews/TA): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಿದರೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ಸ್ವೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಶಾಸಕ ಹಾಗೂ ಮಾಜಿ ಸಚಿವ ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಇದಕ್ಕೂ ಮೊದಲು ಹೇಳಿದ್ದೇನೆ-ಡಿಕೆಶಿ ಸಿಎಂ ಆದರೆ, ಅವರ ಸಂಪುಟದಲ್ಲಿ ನಾನು ಸಚಿವ ಆಗುವುದಿಲ್ಲ. ಮತ್ತೆ ಅದನ್ನೇ ಹೇಳುತ್ತಿದ್ದೇನೆ. ನನ್ನಿಗೆ ಸಚಿವ ಸ್ಥಾನ ಬೇಡ. ಮತ್ತೊಬ್ಬರಿಗೆ ಅವಕಾಶ ಕೊಡಲಿ,” ಎಂದು ಸ್ಪಷ್ಟವಾಗಿ ಹೇಳಿದರು. ಅಧಿಕಾರದ ಬಗ್ಗೆ ತಮ್ಮ ನಿಲುವನ್ನು ವಿವರಿಸಿದ ರಾಜಣ್ಣ, “ನಾನು ಯಾವತ್ತೂ ಅಧಿಕಾರಕ್ಕಾಗಿ ಹುಡುಕಿ ಹೋದವನಲ್ಲ. ಅಧಿಕಾರ ಬೇಕೆಂದು ಅಪೇಕ್ಷೆ ಪಡುವವನೂ ಅಲ್ಲ. ಆದರೆ ನಾನು ಸಚಿವನಾಗಿದ್ದಾಗ ಮಾಡಿದ ಕೆಲಸಗಳನ್ನು ನೋಡಿ, ನಾನು ಜಾರಿ ಮಾಡಿದ ತಿದ್ದುಪಡಿ ಅನುಷ್ಠಾನಗೊಂಡರೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗುತ್ತದೆ. ಸಮುದಾಯ ಮೀಸಲಾತಿಯನ್ನು ಸಹಕಾರಿ ಸಂಸ್ಥೆಗಳಲ್ಲಿ ಜಾರಿಗೊಳಿಸಿದ್ದೇ ನನ್ನ ಪ್ರಮುಖ ಕೆಲಸ,” ಎಂದು ತಮ್ಮ ಸಾಧನೆಗಳನ್ನು ಸ್ಮರಿಸಿದರು.
ಸಿಎಂ ಮತ್ತು ಡಿಸಿಎಂ ಧರಿಸಿರುವ ದುಬಾರಿ ವಾಚ್ಗಳ ಬಗ್ಗೆ ವಿರೋಧ ಪಕ್ಷ ಮುಗಿಬಿದ್ದಿರುವುದನ್ನು ಟೀಕಿಸಿದ ರಾಜಣ್ಣ, “ವಿರೋಧ ಪಕ್ಷಕ್ಕೆ ವಿರೋಧ ಮಾಡಲು ವಿಷಯವೇ ಇಲ್ಲ. ವಾಚ್ ಧರಿಸಿದ್ರೂ, ಊಟಕ್ಕೆ ಹೋದರೂ ಟೀಕಿಸುತ್ತಾರೆ. ಜ್ವಲಂತ ಸಾರ್ವಜನಿಕ ಸಮಸ್ಯೆಗಳ ಕಡೆ ಗಮನ ಹರಿಸಲಿ,” ಎಂದು ಸಲಹೆ ನೀಡಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್ಗೆ ನೋಟಿಸ್ ನೀಡಿರುವ ವಿಚಾರ ಕೇಳಿದಾಗ ರಾಜಣ್ಣ, “ನೋಟಿಸ್ ಬಂದಿದೆ ಅಂತೆ, ಆದರೆ ಏನಕ್ಕಾಗಿ ಕೊಟ್ಟಿದ್ದಾರೆ ಎನ್ನೋ ಮಾಹಿತಿ ನನಗೂ ಇಲ್ಲ. ಅವರ ವಿರುದ್ಧ 128 ಕೇಸ್ಗಳಿವೆ. ಅದರಲ್ಲಿ ಯಾವುದುಕ್ಕೆ ನೋಟಿಸ್ ಬಂದಿದೆ ಎಂದು ಯಾರಿಗೆ ಗೊತ್ತು,” ಎಂದು ಹೇಳಿಕೆ ನೀಡಿದರು.