ಹುಬ್ಬಳ್ಳಿ, ಡಿ. 06 (DaijiworldNews/TA): ನವೆಂಬರ್ 23ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದ ಮೇಧಾ ಕ್ಷೀರಸಾಗರ ಮತ್ತು ಸಂಗಮ ದಾಸ್ ಅವರಿಗಾಗಿ ನಗರದಲ್ಲಿ ಬುಧವಾರ ದೊಡ್ಡ ಗುಜರಾತ್ ಭವನದಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಆದರೆ ವಧು-ವರರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಇದಕ್ಕೆಲ್ಲ ಕಾರಣ ಇಂಡಿಗೋ ಎಂದು ಪೋಷಕರು ಕಿಡಿಕಾರಿದ್ಧಾರೆ.

ಭುವನೇಶ್ವರದಿಂದ ಹುಬ್ಬಳ್ಳಿಗೆ ವಧು-ವರರು ವಿಮಾನ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದರೆ, ಇಂಡಿಗೋ ಏರ್ಲೈನ್ಸ್ ವಿಮಾನ ರದ್ದು ಮತ್ತು ವಿಳಂಬದ ಕಾರಣ ಅವರು ಹುಬ್ಬಳ್ಳಿಗೆ ತಲುಪಲಾಗಲಿಲ್ಲ. ಡಿಸೆಂಬರ್ 2ರಿಂದ 3ರವರೆಗೆ ವಿಮಾನಗಳ ನಿಯಮಿತ ಸಮಯದಲ್ಲಿ ಹಾರಾಟ ಸಾಧ್ಯವಾಗದೆ, ಕೊನೆಗೆ ಏಕಾಏಕಿ ಡಿಸೆಂಬರ್ 3ರಂದು ಬೆಳಿಗ್ಗೆ ವಿಮಾನ ರದ್ದುಪಡಿಸಲಾಯಿತು.
ಈ ಕಾರಣದಿಂದ, ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಆರತಕ್ಷತೆಯಲ್ಲಿ ವಧು-ವರರು ಹಾಜರಾಗಲಾಗದೆ, ವಧುವಿನ ತಂದೆ-ತಾಯಿ, ಮಗಳು-ಅಳಿಯನ ಸ್ಥಾನದಲ್ಲಿ ಕುಳಿತು, ಬಂದ ಅತಿಥಿಗಳನ್ನು ಸ್ವಾಗತಿಸಿ ಶುಭಾಶಯ ಸ್ವೀಕರಿಸಿದರು. ವಧು-ವರರು ಭುವನೇಶ್ವರದಿಂದ ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಮೇಧಾ ಮತ್ತು ಸಂಗಮ, ಭುವನೇಶ್ವರದಲ್ಲಿ ಮದುವೆ ಆಗಿದ್ದು, ನಂತರ ಹುಬ್ಬಳ್ಳಿಯಲ್ಲಿ ಕುಟುಂಬ ಹಾಗೂ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದರು. ಆದರೆ ವಿಮಾನ ಬಿಕ್ಕಟ್ಟು ಈ ಸಂಭ್ರಮದ ಕ್ಷಣಕ್ಕೆ ಅಡ್ಡಿಪಡಿಸಿದೆ.