ನವದೆಹಲಿ, ಡಿ. 06 (DaijiworldNews/TA): ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಗಂಭೀರ ಕಾರ್ಯಾಚರಣಾ ಬಿಕ್ಕಟ್ಟಿನಲ್ಲಿದೆ. ಒಂದೇ ದಿನದಲ್ಲಿ ನೂರಾರು ವಿಮಾನಗಳು ರದ್ದಾಗಿದ್ದು, ಅನೇಕ ವಿಮಾನಗಳು ಗಂಟೆಗಟ್ಟಲೆ ವಿಳಂಬಗೊಂಡ ಪರಿಣಾಮ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ದೀರ್ಘ ಸಾಲಿನಲ್ಲಿ ಸಿಲುಕಿದ್ದಾರೆ. ಪೂರ್ವ ಸೂಚನೆ ನೀಡದೆ ವಿಮಾನ ರದ್ದು ಮಾಡಲಾಗಿದೆ ಎಂಬುದಾಗಿ ಪ್ರಯಾಣಿಕರು ಗಂಭೀರ ಆರೋಪ ಮಾಡಿದ್ದಾರೆ.

ಏನು ನಡೆದಿದೆ? 10 ಅಂಶಗಳಲ್ಲಿ ಇಂಡಿಗೋ ತೊಂದರೆಗಳು:
1. ಹಠಾತ್ ಕಾರ್ಯಾಚರಣಾ ವೈಫಲ್ಯ :
ನವೆಂಬರ್ 1ರಿಂದ ಜಾರಿಗೆ ಬಂದ ಹೊಸ Flight Duty Time Limit (FDTL) ನಿಯಮಗಳು ಇಂಡಿಗೋಗೆ ದೊಡ್ಡ ಹೊಡೆತ ತಂದಿವೆ. ಈ ನಿಯಮಗಳ ಪ್ರಕಾರ ಪೈಲಟ್ಗಳ ವಿಶ್ರಾಂತಿ 36 ಗಂಟೆಯಿಂದ 48 ಗಂಟೆಗೆ ಹೆಚ್ಚಿಸಲಾಗಿದೆ ಮತ್ತು ರಾತ್ರಿ ಲ್ಯಾಂಡಿಂಗ್ ಮಿತಿಯನ್ನು 6 ರಿಂದ 2ಕ್ಕೆ ಇಳಿಸಲಾಗಿದೆ. ಈ ಬದಲಾವಣೆಗೆ ಕಂಪನಿ ಸಿದ್ಧವಾಗಿರಲಿಲ್ಲ.
2. DGCA ತಾತ್ಕಾಲಿಕ ವಿನಾಯಿತಿ: ಅವ್ಯವಸ್ಥೆಯನ್ನು ಸರಿಪಡಿಸಲು ನಾಗರಿಕ ವಿಮಾನಯಾನ ನಿಯಂತ್ರಕ DGCA ಫೆಬ್ರವರಿ 10, 2026ರವರೆಗೆ ಎಫ್ಡಿಟಿಎಲ್ನ ಕೆಲವು ನಿಯಮಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿದೆ. ಇದನ್ನು ಸುರಕ್ಷತಾ ಮಾನದಂಡಗಳ ಸಡಿಲಿಕೆ ಎಂದು ಪರಿಗಣಿಸಲಾಗುವುದಿಲ್ಲ.
3. ಒಂದೇ ದಿನ ನೂರಾರು ವಿಮಾನ ರದ್ದು : ಕೆಲವು ವಿಮಾನಗಳಲ್ಲದೇ-ದೇಶಾದ್ಯಂತ ಒಂದೇ ದಿನ ನೂರಾರು ಇಂಡಿಗೋ ವಿಮಾನಗಳು ರದ್ದಾಗಿವೆ, ಮರುನಿಗದಿಪಡಿಸಲಾಗಿದೆ.
4. ಸಿಬ್ಬಂದಿ ಮತ್ತು ತಾಂತ್ರಿಕ ಕೊರತೆ ಶಂಕೆ: ಸಿಬ್ಬಂದಿ ಕೊರತೆ ಮತ್ತು ನಿರ್ವಹಣಾ ಸಮಸ್ಯೆಯೂ ಕಾರಣವಾಗಿರಬಹುದೆಂದು ಮೂಲಗಳು ಹೇಳಿವೆ. ಆದರೆ ಕಂಪನಿಯು ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
5. ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ: ಟಿಕೆಟ್ ಕೌಂಟರ್ಗಳ ಮುಂದೆ ಪ್ರಯಾಣಿಕರ ಮೀಟರ್ನಷ್ಟು ಉದ್ದ ಸಾಲುಗಳು ಕಂಡುಬಂದಿವೆ. ಜನರು ಮಾಹಿತಿ ಪಡೆಯಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
6. ಕೊನೆಯ ಕ್ಷಣದ ಮಾಹಿತಿ: ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪ್ರಯಾಣಿಕರು “ಕೊನೆಯ ಕ್ಷಣದಲ್ಲಿ ಮಾತ್ರ ವಿಮಾನ ರದ್ದು ಮಾಹಿತಿ ಬಂದಿದೆ” ಎಂದು ದೂರು ನೀಡಿದ್ದಾರೆ.
7. ಮರುಪಾವತಿ-ಮರು ಬುಕ್ಕಿಂಗ್ ಬೇಡಿಕೆ ಹೆಚ್ಚಳ: ವಿಮಾನಯಾನ ಸಂಸ್ಥೆಯ ತಪ್ಪಿನಿಂದ ವಿಮಾನ ರದ್ದು ಆಗಿದ್ದರೆ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಕಡ್ಡಾಯ. ಸಾವಿರಾರು ಮಂದಿ ಈಗ ಮರು ಬುಕ್ಕಿಂಗ್ ಅಥವಾ ಮರುಪಾವತಿಗಾಗಿ ಒತ್ತಾಯಿಸುತ್ತಿದ್ದಾರೆ.
8. ವ್ಯಾಪಾರ-ರಜಾ ಪ್ರಯಾಣಕ್ಕೆ ದೊಡ್ಡ ಹೊಡೆತ: ವ್ಯಾಪಾರ ಸಭೆಗಳಿಗೆ ಹೋಗಬೇಕಿದ್ದವರು ಮುಖ್ಯ ವಿಮರ್ಶೆಗಳನ್ನು ತಪ್ಪಿಸಿಕೊಂಡಿದ್ದಾರೆ. ಹಲವರ ರಜಾ ಯೋಜನೆಗಳು ಸಂಪೂರ್ಣ ಅಸ್ತವ್ಯಸ್ತವಾಗಿವೆ.
9. ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ: ನಾಗರಿಕ ವಿಮಾನಯಾನ ಸಚಿವಾಲಯ 24x7 ನಿಯಂತ್ರಣ ಕೊಠಡಿ ಮೂಲಕ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಇಂಡಿಗೋ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದೆ.
ಸಹಾಯವಾಣಿ ಸಂಖ್ಯೆ: 011-24610843, 011-24693963, 096503-91859
10. ಇಂಡಿಗೋ ಸಿಇಒ ಕ್ಷಮೆ, ಡಿ. 10–15ರ ನಡುವೆ ಸಾಮಾನ್ಯಕಾರ್ಯಾಚರಣೆ ಪುನರಾರಂಭ : ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವೀಡಿಯೋ ಸಂದೇಶ ಬಿಡುಗಡೆ ಮಾಡಿ ಪ್ರಯಾಣಿಕರಿಗೆ ಕ್ಷಮೆಯಾಚಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ 1,000ಕ್ಕಿಂತ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಡಿಸೆಂಬರ್ 10 ರಿಂದ 15ರ ನಡುವೆ ಸಾಮಾನ್ಯ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆ.