ತಿರುವನಂತಪುರಂ, ಡಿ. 06 (DaijiworldNews/TA): ಒಂದೆಡೆ ಕೇರಳದಲ್ಲಿ ಪಂಚಾಯತ್ ಮತದಾನದ ಕಾವು ಹೆಚ್ಚಾಗಿದ್ರೆ ಇದೀಗ ದೇವರ ನಾಡಿನಲ್ಲಿ ಆಧಾರ್ ಕಾರ್ಡ್ ಗೋಲ್ಮಾಲ್ ವಿಚಾರ ಮುನ್ನಲೆಗೆ ಬಂದಿದೆ. ಜನಸಂಖ್ಯೆಗಿಂತ ಹೆಚ್ಚಿನ ಆಧಾರ್ ಕಾರ್ಡ್ ಕಾರ್ಯಪ್ರವೃತ್ತಿಯಲ್ಲಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು ಕೇರಳದಲ್ಲಿ ಜನಸಂಖ್ಯೆಯಿಗಿಂತ ಹೆಚ್ಚು ಆಧಾರ್ ಕಾರ್ಡ್ಗಳು ನೋಂದಾಯಿತವಾಗಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಯುಐಡಿಎಐ (UIDAI) ಪ್ರಕಟಿಸಿರುವ ಇತ್ತೀಚಿನ ಡೇಟಾ ಪ್ರಕಾರ, ಕೇರಳದ ಒಟ್ಟು 3.60 ಕೋಟಿ ಜನರಿಗೆ 4.09 ಕೋಟಿಗೂ ಹೆಚ್ಚು ಆಧಾರ್ ಕಾರ್ಡ್ಗಳು ಜಾರಿಯಲ್ಲಿದ್ದು, ಸುಮಾರು 49 ಲಕ್ಷ ಆಧಾರ್ ಸಂಖ್ಯೆ ಹೆಚ್ಚುವರಿಯಾಗಿ ಬಳಕೆಯಲ್ಲಿರುವುದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಆಧಾರ್ ಕಾರ್ಡ್ಗಳ ದುರ್ಬಳಕೆಯನ್ನು ತಡೆಯಲು UIDAI ದೇಶವ್ಯಾಪಿ "ಬಿಗ್ ಆಪರೇಷನ್" ನಡೆಸುತ್ತಿರುವ ಸಂದರ್ಭದಲ್ಲಿ ಈ ಅಂಕಿಅಂಶಗಳು ಹೊರಬಿದ್ದಿವೆ. ಸತ್ತವರ ಹೆಸರಿನಲ್ಲಿ ಆಧಾರ್ ಸಂಖ್ಯೆಗಳು ಸಕ್ರಿಯವಾಗಿರುವುದು ಮತ್ತು ನಕಲಿ ಆಧಾರ್ ಕಾರ್ಡ್ಗಳ ಬಳಕೆ ಹೆಚ್ಚಿರುವುದು ಸಂಖ್ಯೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಮೃತಪಟ್ಟವರ ಆಧಾರ್ ಸಂಖ್ಯೆಗಳನ್ನು ಸಕಾಲಿಕವಾಗಿ ರದ್ದುಗೊಳಿಸದಿರುವುದು ಈ ವ್ಯತ್ಯಾಸವನ್ನು ಮತ್ತಷ್ಟು ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸ್ಥಿತಿ ದೇಶದ ಮಟ್ಟದಲ್ಲೂ ಕಂಡುಬರುತ್ತಿದೆ. ಭಾರತದಲ್ಲಿ 141.22 ಕೋಟಿ ಜನಸಂಖ್ಯೆಯ ನಡುವೆ 142.95 ಕೋಟಿಗೂ ಹೆಚ್ಚು ಆಧಾರ್ ಕಾರ್ಡ್ಗಳು ನೋಂದಾಯಿತವಾಗಿವೆ. ಕೇರಳದ ಜೊತೆಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಆಧಾರ್ ಕಾರ್ಡ್ ಎಣಿಕೆಯೇ ಹೆಚ್ಚಾಗಿದೆ.
UIDAI ಈಗಾಗಲೇ ದೊಡ್ಡ ಮಟ್ಟದಲ್ಲಿ ಪರಿಶೀಲನೆ ನಡೆಸಿ 1.7 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ರದ್ದುಗೊಳಿಸಿದೆ. ದೇಶದ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒದಗಿಸಿದ 1.55 ಕೋಟಿ ಮರಣ ದಾಖಲೆಗಳನ್ನು ಪರಿಶೀಲಿಸಿದ ನಂತರ, 1.17 ಕೋಟಿ ಮೃತರ ಆಧಾರ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಸತ್ತವರ ಆಧಾರ್ ಸಂಖ್ಯೆಯನ್ನು ಕುಟುಂಬ ಸದಸ್ಯರು ಸುಲಭವಾಗಿ ರದ್ದುಗೊಳಿಸಲು UIDAI ಜೂನ್ 9, 2025ರಂದು myAadhaar ಪೋರ್ಟಲ್ನಲ್ಲಿ ‘ಕುಟುಂಬ ಸದಸ್ಯರ ಮೃತ್ಯು ವರದಿ’ ಸೇವೆಯನ್ನು ಆರಂಭಿಸಿದೆ. ಮರಣ ಪ್ರಮಾಣಪತ್ರದೊಂದಿಗೆ ಈ ಪೋರ್ಟಲ್ನಲ್ಲಿ ಸಾವನ್ನು ದಾಖಲು ಮಾಡಿದ ಬಳಿಕ ಆಧಾರ್ ಸಂಖ್ಯೆಯನ್ನು ಅಧಿಕೃತವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಕೇರಳದಲ್ಲಿ ಕಾಣಿಸಿಕೊಂಡಿರುವ ಈ ಅಸಮಾನತೆ ಆಧಾರ್ ಡೇಟಾಬೇಸ್ನ ನಿಖರತೆ ಮತ್ತು ಪಾರದರ್ಶಕತೆ ಕುರಿತು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.