ನವದೆಹಲಿ,,ಡಿ. 05 (DaijiworldNews/AK): ವಿಮಾನಗಳು ರದ್ದಾಗಿದ್ದರಿಂದ ಪ್ರಯಾಣಿಕರಿಗೆ ತೀವ್ರವಾದ ತೊಂದರೆ ಆಗಿದ್ದಕ್ಕೆ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಇಂದು ಸಂಜೆ ಸಾರ್ವಜನಿಕ ಕ್ಷಮೆಯಾಚಿಸಿದರು.

ಇಂದು ಸಾವಿರಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಇಂದು ತನ್ನ ದೈನಂದಿನ ವಿಮಾನಗಳ “ಅರ್ಧಕ್ಕಿಂತ ಹೆಚ್ಚು” ವಿಮಾನಗಳನ್ನು ರದ್ದುಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್, ಶನಿವಾರ ಕೂಡ ಬಿಕ್ಕಟ್ಟು ಮುಂದುವರಿದರೂ, ಇಂಡಿಗೋದಿಂದ 1,000ಕ್ಕಿಂತ ಕಡಿಮೆ ವಿಮಾನಗಳನ್ನು ರದ್ದುಗೊಳಿಸಲಾಗುವುದು. ಡಿಸೆಂಬರ್ 15ರೊಳಗೆ ಎಲ್ಲ ವಿಮಾನಗಳು ಸಹಜ ಸ್ಥಿತಿಗೆ ಬರಲಿದೆ ಎಂದು ಅವರು ಭರವಸೆ ನೀಡಿದ್ದಾರೆ..
ಕಳೆದ ಕೆಲವು ದಿನಗಳು ನಮ್ಮ ಅನೇಕ ಇಂಡಿಗೋ ಗ್ರಾಹಕರು ಮತ್ತು ಸಹೋದ್ಯೋಗಿಗಳಿಗೆ ಕಷ್ಟಕರವಾಗಿದ್ದವು. ನಾವು ದಿನಕ್ಕೆ ಸುಮಾರು 380,000 ಗ್ರಾಹಕರಿಗೆ ಸೇವೆ ಸಲ್ಲಿಸುತ್ತೇವೆ ಮತ್ತು ಅವರಲ್ಲಿ ಪ್ರತಿಯೊಬ್ಬರೂ ಉತ್ತಮ ಅನುಭವವನ್ನು ಪಡೆಯಬೇಕೆಂದು ಬಯಸುತ್ತೇವೆ. ಕಳೆದ ದಿನಗಳಲ್ಲಿ ನಾವು ಆ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಮತ್ತು ಅದಕ್ಕಾಗಿ ನಾವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದೇವೆ" ಎಂದು ಎಲ್ಬರ್ಸ್ ಬರೆದಿದ್ದಾರೆ.