ನವದೆಹಲಿ, ಡಿ. 05 (DaijiworldNews/AA): ಇಂಡಿಗೋ ವಿಮಾನದ 'ವೈಫಲ್ಯ'ಕ್ಕೆ ಮೋದಿ ಸರ್ಕಾರದ 'ಏಕಸ್ವಾಮ್ಯ ಮಾದರಿ'ಯೇ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಸರ್ಕಾರವು ಕೈಗಾರಿಕೆಗಳಲ್ಲಿ ಏಕಸ್ವಾಮ್ಯ ಮಾದರಿಗೆ ಅವಕಾಶ ನೀಡಿದ ಪರಿಣಾಮವೇ ಇಂದು ಇಂಡಿಗೋದ ಸಮಸ್ಯೆ ಎದುರಾಗಿದೆ. ಕೆಲವರು ಮಾತ್ರ ನಿಯಂತ್ರಿಸುವ ವ್ಯವಸ್ಥೆಗಳ ಬದಲು ಭಾರತವು ಎಲ್ಲ ವಲಯಗಳಲ್ಲೂ ನ್ಯಾಯಯುತ ಸ್ಪರ್ಧೆಯನ್ನು ಹೊಂದಿರಬೇಕು" ಎಂದು ಆಕ್ರೋಶ ಹೊರಹಾಕಿದ್ದಾರೆ.
"ಇಂಡಿಗೋ ವೈಫಲ್ಯವು ಸರ್ಕಾರದ ಏಕಸ್ವಾಮ್ಯ ಮಾದರಿಯ ಪರಿಣಾಮವಾಗುತ್ತಿದೆ. ಮತ್ತೊಮ್ಮೆ, ವಿಳಂಬ, ರದ್ದತಿ ಮತ್ತು ಅಸಹಾಯಕತೆಯಲ್ಲಿ ಸಾಮಾನ್ಯ ಭಾರತೀಯರು ಬೆಲೆ ತೆರುತ್ತಿದ್ದಾರೆ. ಭಾರತವು ಪ್ರತಿಯೊಂದು ವಲಯದಲ್ಲೂ ನ್ಯಾಯಯುತ ಸ್ಪರ್ಧೆಗೆ ಅರ್ಹವಾಗಿದೆ, ಮ್ಯಾಚ್ ಫಿಕ್ಸಿಂಗ್ ಏಕಸ್ವಾಮ್ಯಗಳಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
"ಭಾರತೀಯ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಗುರುವಾರ ೫೫೦ಕ್ಕೂ ಹೆಚ್ಚು ಮತ್ತು ಶುಕ್ರವಾರ 400 ವಿಮಾನಗಳ ಸಂಚಾರ ರದ್ದುಗೊಳಿಸಿ ನೂರಾರು ಪ್ರಯಾಣಿಕರ ಪ್ರಯಾಣ ಯೋಜನೆಗಳನ್ನು ಅಸ್ತವ್ಯಸ್ತಗೊಳಿಸಿದ ನಂತರ, ವಿಳಂಬ, ರದ್ದತಿ ಮತ್ತು ಅಸಹಾಯಕತೆಗೆ ಸಾಮಾನ್ಯ ಭಾರತೀಯರು ಬೆಲೆ ತೆರಬೇಕಾಗುತ್ತಿದೆ" ಎಂದು ತಿಳಿಸಿದರು.