ನವದೆಹಲಿ, ಡಿ. 05 (DaijiworldNews/AA): ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಿದ್ದು, ಈ ಮೂಲಕ ಶೇ. 5.50ರಷ್ಟು ಇದ್ದ ಬಡ್ಡಿದರವು ಶೇ. 5.25ಕ್ಕೆ ಇಳಿದಿದೆ.

ಬುಧವಾರದಿಂದ ನಡೆದ ಎಂಪಿಸಿ ಸಭೆಯ ನಿರ್ಧಾರಗಳನ್ನು ಶುಕ್ರವಾರ ಪ್ರಕಟಿಸಿದ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, "ಎಂಪಿಸಿಯ ಆರೂ ಸದಸ್ಯರು ಸರ್ವಾನುಮತದಿಂದ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಹೊಸ ದರಗಳು ತತ್ಕ್ಷಣದಿಂದಲೇ ಜಾರಿಗೆ ಬರುತ್ತವೆ" ಎಂದು ತಿಳಿಸಿದ್ದಾರೆ.
"ಅನಿಶ್ಚಿತ ಬಾಹ್ಯ ಪರಿಸ್ಥಿತಿ ನಡುವೆಯೂ ದೇಶದ ಆರ್ಥಿಕತೆಯ ಶಕ್ತಿ ಉತ್ತಮವಾಗಿದೆ. ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಬೇಡಿಕೆ ಉತ್ತಮವಾಗಿದೆ. ಖಾಸಗಿ ಹೂಡಿಕೆಯೂ ಚೆನ್ನಾಗಿ ಆಗುತ್ತಿದೆ" ಎಂದು ಹೇಳಿದ್ದಾರೆ.
"ಭಾರತದ ಆರ್ಥಿಕತೆ ಈ ವರ್ಷ ಮೊದಲಾರ್ಧ ಶೇ. 8ರಷ್ಟು ಬೆಳೆದಿದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದಾರೆ. ಮುಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಜಿಡಿಪಿ ಶೇ. 7, ಶೇ 6.5, ಶೇ. 6.7 ಮತ್ತು ಶೇ. 6.8ರಷ್ಟು ಬೆಳೆಯಬಹುದು" ಎಂದು ವಿವರಿಸಿದ್ದಾರೆ.