ನವದೆಹಲಿ, ಡಿ. 04 (DaijiworldNews/AK):ಭಾರತದ ರೂಪಾಯಿ, ಡಾಲರ್ ವಿರುದ್ಧ ದಾಖಲೆ ಮಟ್ಟದಲ್ಲಿ ಕುಸಿತ ಕಾಣುತ್ತಿದೆ. ಕಳೆದ ಮೇ ತಿಂಗಳಿನಲ್ಲಿ 1 ಡಾಲರ್ 84 ರೂ.ಗೆ ವಿನಿಮಯ ಆಗುತ್ತಿದ್ದರೆ ಈಗ 90 ರೂ. ಗಡಿ ದಾಟಿದೆ. ಈ ವರ್ಷ ರೂಪಾಯಿ ಮೌಲ್ಯ 5% ಕುಸಿದಿದೆ.

ವಿಶ್ವದ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಿರಂತರವಾಗಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ. ಹೀಗಿದ್ದರೂ ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೂಪಾಯಿ ಮೌಲ್ಯ ಯಾಕೆ ಕುಸಿಯುತ್ತಿದೆ ಅಂತ ತಿಳಿದುಕೊಳ್ಳುವ ಮೊದಲು ಡಾಲರ್ ಇಷ್ಟೊಂದು ಪವರ್ಫುಲ್ ಕರೆನ್ಸಿ ಹೇಗಾಯ್ತು ಎಂಬ ಪ್ರಶ್ನೆ ಬರುತ್ತದೆ. ಡಾಲರ್ ವಿಶ್ವದ ಪವರ್ಫುಲ್ ಕರೆನ್ಸಿ ಯಾಕಾಯ್ತು ಎನ್ನುವುದಕ್ಕೆ ಹಲವು ಕಾರಣ ನೀಡಬಹುದು. ಅದರಲ್ಲೀ ಮುಖ್ಯವಾಗಿ ಸಿಫ್ಟ್ ನೆಟ್ವರ್ಕ್ನಿಂದ ಪವರ್ಫುಲ್ ಆಗಿದೆ. ಈಗ ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ಸ್ವಿಫ್ಟ್ ವ್ಯವಸ್ಥೆಯ ಮೂಲಕ ನಡೆಯುತ್ತಿದೆ. ಈ ಸ್ವಿಫ್ಟ್ ನೆಟ್ವರ್ಕ್ನಲ್ಲೂ ಡಾಲರ್ ಅನ್ನೇ ಪರಿಗಣನೆ ಮಾಡಲಾಗಿದೆ.
ಟ್ರಂಪ್ ಅಧಿಕಾರಕ್ಕೆ ಏರಿದ ಬಳಿಕ ಕರೆನ್ಸಿ ಕುಸಿತ ಹೆಚ್ಚಾಗಿದೆ. ರಷ್ಯದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ ಟ್ರಂಪ್ ಭಾರತದ ಕೆಲ ವಸ್ತುಗಳ ಮೇಲೆ 50% ಸುಂಕ ವಿಧಿಸಿದ್ದಾರೆ. ಈ ನಿರ್ಧಾರದಿಂದ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ. ಭಾರತದಿಂದ ಅಮೆರಿಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳು ರಫ್ತಾದರೆ ಅಲ್ಲಿಂದ ಕಡಿಮೆ ಪ್ರಮಾಣದಲ್ಲಿ ವಸ್ತುಗಳು ಆಮದಾಗುತ್ತಿದೆ. ಭಾರತದ ಜೊತೆ ವ್ಯಾಪಾರ ಕೊರತೆ ಇರುವ ಕಾರಣ ಟ್ರಂಪ್ ಈಗ ಸುಂಕ ಏರಿಸಿದ್ದಾರೆ. ಇದರಿಂದ ವ್ಯಾಪಾರದಲ್ಲಿ ಅನಿಶ್ಚಿತತೆ ಎದ್ದಿದೆ.