ಬೆಂಗಳೂರು/ನವದೆಹಲಿ, ಡಿ. 04 (DaijiworldNews/AK):ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಉಂಟಾಗಿರುವ ಭಾರೀ ಅಡಚಣೆ ಮೂರನೇ ದಿನವೂ ಮುಂದುವರಿದಿದೆ.

ನಿನ್ನೆ ದೆಹಲಿ, ಮುಂಬೈ, ಬೆಂಗಳೂರು ಏರ್ಪೋರ್ಟ್ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಇನ್ನು ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬ ಕಂಡುಬಂದಿತ್ತು. ಈ ಸಮಸ್ಯೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ. .
ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ಸಿಬ್ಬಂದಿ ಕೊರತೆ ಇತರ ಸಮಸ್ಯೆಗಳಿಂದ ಇಂದು ಸಹ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ವ್ಯಾಪಕ ವಿಳಂಬ ಮತ್ತು ರದ್ದತಿಯಿಂದಾಗಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ನಲ್ಲೂ ತಾಂತ್ರಿಕ ದೋಷ ಉಂಟಾಗಿರುವ ಪರಿಣಾಮ 73 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ನಿನ್ನೆ 43 ವಿಮಾನಗಳ ಹಾರಾಟ ರದ್ದುಗೊಳಿಸಿದ್ದ ಇಂಡಿಗೋ ಇಂದು 73 ವಿಮಾನ ಹಾರಾಟ ರದ್ದುಗೊಳಿಸಿದೆ.