ಗಂಗಾವತಿ, ಡಿ. 04 (DaijiworldNews/TA): ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಲಾವಿದೆ ಆರ್. ಹರ್ಷಿತಾ ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟ ಏರಿ ಕಲೆ ಪ್ರದರ್ಶನ ನೀಡಿದ್ದಾರೆ. ಹನುಮದ್ ವ್ರತಾಚರಣೆ ಸಂದರ್ಭದಲ್ಲಿ, ಪಾಲಕರ ಮಾರ್ಗದರ್ಶನದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ನಡೆಸಿ, ಅವರು 8 ನಿಮಿಷ 59 ಸೆಕೆಂಡಿನಲ್ಲಿ ಶಿಖರವನ್ನು ದಾಟಿದ್ದಾರೆ.

ಬೆಟ್ಟದ ತುದಿಯ ಆವರಣದಲ್ಲಿ ಭರತನಾಟ್ಯ ಕಲೆ ಪ್ರದರ್ಶಿಸಿ, ದೇವರ ದರ್ಶನ ಪಡೆದ ಆರ್. ಹರ್ಷಿತಾರನ್ನು ನಂತರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಿಲಾಯಿತು. ಹನುಮಮಾಲಾ ವಿಸರ್ಜನೆ ಹಾಗೂ ಹನುಮದ್ ವ್ರತಾಚರಣೆಯ ಸಂದರ್ಭದಲ್ಲಿ, ಲಕ್ಷಾಂತರ ಭಕ್ತರು ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ಈ ಭವ್ಯ ಪ್ರದರ್ಶನ ನೆರವೇರಿತು.
ಕಳೆದ ಎರಡು ದಿನಗಳಿಂದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪವಮಾನ ಹೋಮ, ವಿವಿಧ ಹೋಮ ಹವನ, ವಿಶೇಷ ಪೂಜೆಗಳು ನಡೆಯಿತು. ಆಂಜನೇಯ ಸ್ವಾಮಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ದೇವಾಲಯದ ಒಳಗೂ ಹೊರಗೂ ಹೂಗಳಿಂದ ಅಲಂಕರಿಸಲಾಗಿತ್ತು.