ಬೆಂಗಳೂರು, ಡಿ. 04 (DaijiworldNews/TA): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರವೂ ವಿಮಾನಗಳ ಹಾರಾಟದಲ್ಲಿ ಭಾರಿ ಸಮಯ ವ್ಯತ್ಯಯ ಉಂಟಾಗಿದೆ. ಇಂಡಿಗೋ ವಿಮಾನ ಸಂಸ್ಥೆಗೆ ಸೇರಿದ ಒಟ್ಟು 142 ವಿಮಾನಗಳಲ್ಲಿ ಕೆಲವು ವಿಳಂಬವಾಗಿದ್ದು, 42 ವಿಮಾನಗಳು ರದ್ದುಗೊಂಡಿವೆ. ಕೆಲವು ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದ್ದು, ಪ್ರಯಾಣಿಕರಿಗೆ ಉಂಟಾದ ಅಸೌಕರ್ಯಕ್ಕೆ ಸಂಸ್ಥೆ ಕ್ಷಮೆಯಾಚಿಸಿದೆ.

ವಿಮಾನ ನಿರ್ವಹಣಾ ವ್ಯತ್ಯಯಕ್ಕೆ ಕಾರಣವಾಗಿ, ಕಳೆದ ತಿಂಗಳಿಂದ ಜಾರಿಯಾದ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್, ಪೈಲಟ್ಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾತಿ ನೀಡದಿರುವುದು ಮುಖ್ಯವಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮೂಲಗಳು ಈ ಕಾರಣವನ್ನು ಒಪ್ಪಿದ್ದಾರೆ. ಇತರೆ ಅಡಚಣೆಗಳಿಗೆ, ಸಣ್ಣ ತಾಂತ್ರಿಕ ದೋಷಗಳು, ಚಳಿಗಾಲದ ವೇಳಾಪಟ್ಟಿ ಬದಲಾವಣೆ, ಹವಾಮಾನ ವೈಪರೀತ್ಯ, ವಿಮಾನಯಾನ ವ್ಯವಸ್ಥೆಯ ಹೆಚ್ಚಿದ ವಾಹನ ದಟ್ಟಣೆ ಸೇರಿದಂತೆ ವಿವಿಧ ಅಂಶಗಳು ಪ್ರಭಾವ ಬೀರಿವೆ.
ಇಂಡಿಗೋ ಸಂಸ್ಥೆ ಅರ್ಹ ಪ್ರಯಾಣಿಕರಿಗೆ ಹಣ ಮರುಪಾವತಿ ಅಥವಾ ಪರ್ಯಾಯ ವಿಮಾನ ಸೇವೆಯನ್ನು ಒದಗಿಸಲಿದೆ ಎಂದು ಪ್ರಕಟಣೆ ನೀಡಿದೆ. ಸಂಸ್ಥೆಯು “ಕಳೆದ ಎರಡು ದಿನಗಳಿಂದ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಪ್ರಯಾಣಿಕರಿಗೆ ಉಂಟಾದ ಅಸೌಕರ್ಯಕ್ಕೆ ಕ್ಷಮೆಯಾಚಿಸುತ್ತೇವೆ” ಎಂದು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಬುಧವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ನ 38 ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಕಂಡುಬಂದಿದೆ. ವಿಮಾನದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳನ್ನು ಸಿಬ್ಬಂದಿ ಗಮನಿಸಿದ ಕಾರಣ, ಮಂಗಳವಾರ ಮೂರು ವಿಮಾನಗಳು ಒಂದು ಗಂಟೆಗೂ ಹೆಚ್ಚು ತಡವಾಗಿ ಸಂಚರಿಸಿವೆ. ವಿಮಾನಗಳನ್ನು ಗೇಟ್ಗೆ ಹಿಂದಕ್ಕೆ ಕರೆಸಿ ನಿರ್ವಹಣಾ ಸಿಬ್ಬಂದಿ ಪರಿಶೀಲನೆ ನಡೆಸಿದ ನಂತರ, ಸಂಚಾರಕ್ಕೆ ಅನುಮತಿ ನೀಡಲಾಗಿದೆ.