ಅಮ್ರೋಹಾ, ಡಿ. 04 (DaijiworldNews/TA): ವೈದ್ಯರಾಗಿ ಸೇವೆ ಸಲ್ಲಿಸುವ ಕನಸು ಹೊತ್ತಿದ್ದ ನಾಲ್ವರು ಯುವ ವೈದ್ಯ ವಿದ್ಯಾರ್ಥಿಗಳ ಜೀವನ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕ್ಷಣಾರ್ಧದಲ್ಲಿ ನಾಶವಾಯಿತು. ಅಮ್ರೋಹಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದುರಂತದಲ್ಲಿ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ನಾಲ್ವರು ಎಂಬಿಬಿಎಸ್ ಇಂಟರ್ನ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅತಿ ವೇಗದಲ್ಲಿ ಸಾಗುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರು, ಹೆದ್ದಾರಿ ಬದಿಯಲ್ಲಿ ನಿಂತಿದ್ದ ಫೋಮ್ ಹಾಸಿಗೆ ತುಂಬಿದ ಕ್ಯಾಂಟರ್ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಕ್ಷಣಾರ್ಧದಲ್ಲಿ ನಜ್ಜುಗುಜ್ಜಾಗಿ ಬೆಂಕಿ ಜ್ವಾಲೆಗೆ ಆಹುತಿಯಾಗಿದೆ. ಕಾರಿನೊಳಗಿನ ನಾಲ್ವರು ವಿದ್ಯಾರ್ಥಿಗಳನ್ನೂ ಹೊರತೆಗೆಸಲು ಸಾಧ್ಯವಾಗದೆ ಅವರು ಅಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ.
ದುರಂತವು ರಾತ್ರಿ 9 ಗಂಟೆ ಸುಮಾರಿಗೆ ರಾಜಬ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ರಾಸಿ ಸರ್ವಿಸ್ ರಸ್ತೆ ಬಳಿ ನಡೆದಿದೆ. ಪೊಲೀಸರ ಹೇಳಿಕೆಯ ಪ್ರಕಾರ, ಕಾರು ಗಂಟೆಗೆ 100 ಕಿಮೀ ಗಿಂತ ಹೆಚ್ಚು ವೇಗದಲ್ಲಿತ್ತು. ಹಠಾತ್ತನೆ ಕ್ಯಾಂಟರ್ ಎದುರಾಗುತ್ತಿದ್ದಂತೆಯೇ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ತುರ್ತು ಬ್ರೇಕ್ ಬಳಸದೇ ಇರುವುದರಿಂದ, ಕಾರು ನೇರವಾಗಿ ಕ್ಯಾಂಟರ್ ಹಿಂಭಾಗಕ್ಕೆ ಗುದ್ದಿದೆ.
ಸಾವನ್ನಪ್ಪಿದ ವಿದ್ಯಾರ್ಥಿಗಳು 2020 ಬ್ಯಾಚ್ ಎಂಬಿಬಿಎಸ್ ವಿದ್ಯಾರ್ಥಿಗಳು. ಇತ್ತೀಚೆಗೆ ಅಧ್ಯಯನ ಪೂರ್ಣಗೊಂಡು ಇಂಟರ್ನ್ಶಿಪ್ ಮಾಡುತ್ತಿದ್ದರು. ಆಯುಷ್ ಶರ್ಮಾ, ಸಪ್ತ ರಿಷಿ ದಾಸ್, ಅರ್ನಾಬ್ ಚಕ್ರವರ್ತಿ, ಶ್ರೇಷ್ಠ ಪಾಂಚೋಲಿ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.
ಶವಗಳನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತದ ಬಳಿಕ ಕ್ಯಾಂಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ದುರಂತದ ಸುದ್ದಿ ತಿಳಿದ ತಕ್ಷಣ ವಿಶ್ವವಿದ್ಯಾಲಯದಲ್ಲಿ ದಿಗ್ಭ್ರಮೆ ಉಂಟಾಗಿದೆ. ಪ್ರೊ-ಚಾನ್ಸೆಲರ್ ರಾಜೀವ್ ತ್ಯಾಗಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಗುರುತು ಪತ್ತೆಗೆ ಸಹಕರಿಸಿದರು. ಅಮ್ರೋಹಾ ಎಸ್ಪಿ ಅಭಿಷೇಕ್ ಯಾದವ್ ಹಾಗೂ ನಗರ ಎಸ್ಪಿ ಅಮಿತ್ ಕುಮಾರ್ ಆನಂದ್ ಸ್ಥಳ ಪರಿಶೀಲಿಸಿ ವರದಿ ದಾಖಲಿಸಿದ್ದಾರೆ.