ನವದೆಹಲಿ, ಡಿ. 03 (DaijiworldNews/AA): ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು, ರಾಜ್ಯದ ಸಂಸದರ ಬಳಿ ಮಾತನಾಡಿ ಸೂಕ್ತ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ ಅವರಿಗೆ ಪರಿಶೀಲನಾ ಸಭೆ ಇರುವ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಿರ್ಮಲಾ ಸೀತರಾಮನ್ ಅವರಿಗೆ ಸಂಸತ್ನಲ್ಲಿ ಬಿಲ್ ಮಂಡನೆ ಮಾಡಬೇಕಾದ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಾನು ಪ್ರಹ್ಲಾದ್ ಜೋಶಿ ಅವರ ಬಳಿ ಮಾತನಾಡಿದೆ. ಆಗ ಅವರು ಪ್ರಧಾನಿಯವರು ಭಾಗವಹಿಸುವ ಕಾರಣಕ್ಕೆ ಆಗುವುದಿಲ್ಲ ಎಂದಿದ್ದಾರೆ" ಎಂದು ಹೇಳಿದರು.
"ವಿರೋಧ ಪಕ್ಷದ ನಾಯಕರು, ಸಂಸದರು, ಕೇಂದ್ರ ಸಚಿವರು ಸಭೆಯನ್ನು ಒಟ್ಟಿಗೆ ಮಾಡಬೇಕು. ಏಕೆಂದರೆ ರಾಜ್ಯದ ಹಿತಕ್ಕೆ ಒಂದು ದನಿಯಾಗಿ ಹೋರಾಟ ಮಾಡಬೇಕು. ಅದಕ್ಕಾಗಿ ಈ ತಯಾರಿ. ಮುಂದಿನ ಸಭೆಯಲ್ಲಿ ನಮ್ಮ ಸಂಸದರು ಕೈಗೆತ್ತಿಕೊಳ್ಳಬೇಕಾದ ವಿಚಾರಗಳ ಬಗ್ಗೆ ತಿಳಿಸಲಾಗುವುದು. ಯಾರು ನೇತೃತ್ವ ವಹಿಸಬೇಕು ಎಂಬುದು ಮುಖ್ಯ" ಎಂದರು.