ಬಿಜಾಪುರ, ಡಿ. 03 (DaijiworldNews/AA): ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ 12 ನಕ್ಸಲರು ಸಾವನ್ನಪ್ಪಿದ್ದಾರೆ. ಗುಂಡಿನ ಚಕಮಕಿಯಲ್ಲಿ ಜಿಲ್ಲಾ ಮೀಸಲು ಪಡೆ(ಡಿಆರ್ಜಿ)ಯ ಮೂವರು ಸೈನಿಕರು ಕೂಡ ಹುತಾತ್ಮರಾಗಿದ್ದಾರೆ. ಇತರ ಇಬ್ಬರು ಡಿಆರ್ಜಿ ಜವಾನರು ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದಾರೆ.

"ಛತ್ತೀಸ್ಗಢದ ದಂತೇವಾಡ-ಬಿಜಾಪುರ ಗಡಿಯ ಬಳಿಯ ಅರಣ್ಯ ಗಂಗಲೂರು ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಗುಂಡಿನ ಚಕಮಕಿ ನಡೆದಿದೆ. ಎನ್ಕೌಂಟರ್ ಇನ್ನೂ ನಡೆಯುತ್ತಿರುವುದರಿಂದ ಮೃತರಾದ ನಕ್ಸಲರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾ ಮೀಸಲು ಪಡೆ (DRG), ವಿಶೇಷ ಕಾರ್ಯಪಡೆ (STF), ಮತ್ತು CoBRA (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ – CRPFನ ಗಣ್ಯ ಘಟಕ) ಒಳಗೊಂಡ ಜಂಟಿ ತಂಡ ಎನ್ಕೌಂಟರ್ ಕಾರ್ಯಾಚರಣೆಯನ್ನು ನಡೆಸುತ್ತಿತ್ತು. ಎನ್ಕೌಂಟರ್ ನಡೆದ ಸ್ಥಳದಿಂದ ಇದುವರೆಗೆ 12 ನಕ್ಸಲರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಸಿಂಗಲ್ ಲೋಡಿಂಗ್ ರೈಫಲ್ಸ್ (ಎಸ್ಎಲ್ಆರ್), ಇನ್ಸಾಸ್ ರೈಫಲ್ಸ್ .303 ರೈಫಲ್ಸ್, ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.