ನವದೆಹಲಿ, ಡಿ. 03 (DaijiworldNews/AA): ನಕಲಿ ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯನ್ನು ತಂದೊಡ್ಡುತ್ತವೆ. ಎಐ-ಜನರೇಟೆಡ್ ಡೀಪ್ ಫೇಕ್ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಹೊಸ ಕರಡು ನಿಯಮವನ್ನು ಪ್ರಕಟಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸಾಮಾಜಿಕ ಮಾಧ್ಯಮ, ನಕಲಿ ಸುದ್ದಿಗಳು ಮತ್ತು ಎಐ ಜನರೇಟೆಡ್ ಡೀಪ್ ಫೇಕ್ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯದ ಬಗ್ಗೆ ಉತ್ತರಿಸಿದ ಅವರು, "ಯಾವುದೇ ಟಿವಿ ಚಾನೆಲ್ ಅಥವಾ ಪತ್ರಿಕೆಯ ವಿರುದ್ಧ ಬರುವ ದೂರುಗಳನ್ನು ಸರ್ಕಾರ ಮತ್ತು ಭಾರತೀಯ ಪತ್ರಿಕಾ ಮಂಡಳಿಯು ಸಕ್ರಿಯವಾಗಿ ಪರಿಶೀಲಿಸುತ್ತಿದೆ. ಸಮಾಜದ ಮೇಲಿನ ನಂಬಿಕೆಯನ್ನು ಕಾಪಾಡಿಕೊಳ್ಳಲು ಮತ್ತು ಮತ್ತಷ್ಟು ಬಲಪಡಿಸಲು ಸಾಮೂಹಿಕವಾಗಿ ಕೆಲಸ ಮಾಡುವುದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಮೂಲಕ ದೇಶದಲ್ಲಿ ಹೊಸ ಕ್ರಾಂತಿಯನ್ನು ತಂದಿದ್ದಾರೆ. ಭಾರತ ಅದರ ಪಾಸಿಟಿವ್ ಪರಿಣಾಮಗಳನ್ನು ನೋಡುತ್ತಿದೆ. ದೇಶಾದ್ಯಂತ ಕೋಟ್ಯಂತರ ಕುಟುಂಬಗಳಿಗೆ ಸಂಕಷ್ಟ ನೀಡುತ್ತಿರುವ ಆನ್ಲೈನ್ ಮನಿ ಗೇಮಿಂಗ್ ಅನ್ನು ನಿಯಂತ್ರಿಸಲು ಸರ್ಕಾರವು ಅತ್ಯಂತ ಕಠಿಣ ಕಾನೂನನ್ನು ಜಾರಿಗೆ ತಂದಿದೆ" ಎಂದು ಹೇಳಿದರು.
"ಸಾಮಾಜಿಕ ಮಾಧ್ಯಮವು ಪ್ರತಿಯೊಬ್ಬ ನಾಗರಿಕನಿಗೂ ಒಂದು ವೇದಿಕೆಯನ್ನು ಒದಗಿಸಿದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸರ್ಕಾರವು ಸಮಾಜದ ಅಡಿಪಾಯವನ್ನು ರೂಪಿಸುವ ಸಂಸ್ಥೆಗಳು ಮತ್ತು ನಂಬಿಕೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ" ಎಂದು ನುಡಿದರು.