ತುಮಕೂರು, ಡಿ. 03 (DaijiworldNews/AA): ಸಿಎಂ-ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಬೀಗತನ ಮಾಡಿದಂತೆ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.

ಸಿಎಂ-ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ವಿಚಾರವಾಗಿ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೊದಲು ಒಂದು ಕಡೆ ಹೆಣ್ಣು ನೋಡಲು ಬರುತ್ತಾರೆ. ಆಮೇಲೆ ಗಂಡು ನೋಡೋಕೆ ಬರುತ್ತಾರೆ. ಈ ಬ್ರೇಕ್ಫಾಸ್ಟ್ ಮೀಟಿಂಗ್ ಆ ರೀತಿಯಾಗಿದೆ. ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತದೆ. ಯಾವುದೇ ರಿವರ್ಸ್ ಆಗಲ್ಲ" ಎಂದು ಹೇಳಿದರು.
"ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದರೆ ಕುರಿ, ಕೋಳಿ ಬಲಿ ಕೊಡುತ್ತಾರೆ. ಆ ರೀತಿಯಾಗಿ ಎರಡೂ ಮನೆಯಲ್ಲಿ ಆಗಿದೆ. ಬದಲಾವಣೆ ಇಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಬದಲಾವಣೆ ಇದ್ರೆ ಹೈಕಮಾಂಡ್ ಹೇಳುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನದ ನಂತರ ಆಗುತ್ತದೆ" ಎಂದು ತಿಳಿಸಿದರು.
ಬಿಜೆಪಿ ಸಚಿವರನ್ನ ರಾಜಣ್ಣ ಪುತ್ರ ರಾಜೇಂದ್ರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಕ್ರಿಬ್ಕೋದಲ್ಲಿ ರಾಜೇಂದ್ರ ಸೀನಿಯರ್ ನಿರ್ದೇಶಕ ಇದ್ದಾನೆ. ಕ್ರಿಬ್ಕೋ ಇಸ್ಕೋದಲ್ಲಿ ಆರ್ಟಿಫಿಶಿಯಲ್ ಮೆನ್ಯೂರ್ ಮಾಡಬೇಕಾಗಿದೆ. ಆ ಎರಡೂ ಸಮಿತಿಗಳು ಏಷ್ಯಾ ಖಂಡದಲ್ಲಿ ದೊಡ್ಡ ಸಹಕಾರಿ ಸಂಸ್ಥೆಗಳು. ಇದೆಲ್ಲವೂ ಕೇಂದ್ರ ಸಹಕಾರಿ ಸಚಿವರ ಅಡಿಯಲ್ಲಿ ಬರುತ್ತವೆ. ಇದರ ಬಗ್ಗೆ ಚರ್ಚೆಗಳಿದ್ದಾಗ ಅವರೊಬ್ಬರೇ ಅಲ್ಲ, ಇತರೆ ಎಲ್ಲಾ ನಿರ್ದೇಶಕರು ಹೋಗುತ್ತಾರೆ. ಅಮಿತ್ ಶಾ ಕೂಡಾ ಸಭೆ ಕರೆಯುತ್ತಿರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ. ದೆಹಲಿಗೆ ಹೋಗಿ ಬಂದ ಶಾಸಕರ ಪ್ರಯತ್ನವೂ ಸಫಲವೂ ಆಗಿಲ್ಲ ವಿಫಲವೂ ಆಗಿಲ್ಲ" ಎಂದರು.