ನವದೆಹಲಿ, ಡಿ. 03 (DaijiworldNews/TA): ಸ್ವಾತಂತ್ರ್ಯ ಪಡೆದ 75 ವರ್ಷಗಳ ಬಳಿಕವೂ ಭಾರತದ ಆಡಳಿತ ವ್ಯವಸ್ಥೆಯ ಅನೇಕ ಕೇಂದ್ರಗಳಲ್ಲಿ ವಸಾಹತುಶಾಹಿ ಹೆಸರುಗಳ ಪ್ರಭಾವ ಮುಂದುವರಿದಿತ್ತು. ರಾಜ್ಪಥ, ರಾಜಭವನ, ರೇಸ್ ಕೋರ್ಸ್ ರೋಡ್ ಮುಂತಾದ ಹೆಸರುಗಳು ಬ್ರಿಟಿಷ್ ಯುಗದ ಗುರುತುಗಳನ್ನು ಹೊತ್ತುಕೊಂಡಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ, ಈ ಹೆಸರುಗಳನ್ನು ಬದಲಿಸಿ ಭಾರತೀಯ ಮೌಲ್ಯಗಳು ಮತ್ತು ಸೇವಾಮನ್ಯತೆಯನ್ನು ಪ್ರತಿಬಿಂಬಿಸುವ ಹೊಸ ನಾಮಕರಣಕ್ಕೆ ಆದ್ಯತೆ ನೀಡಲಾಗಿದೆ.

ಪ್ರಧಾನಿ ಕಚೇರಿ ಈಗ ‘ಸೇವಾತೀರ್ಥ’: ದೆಹಲಿ ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಹೊಸ ಪ್ರಧಾನ ಮಂತ್ರಿ ಕಚೇರಿ ಸಂಕೀರ್ಣಕ್ಕೆ ‘ಸೇವಾತೀರ್ಥ’ ಎಂಬ ಹೆಸರು ನಿಗದಿಯಾಗಿದೆ. ಪ್ರಧಾನ ಕಚೇರಿ ಎಂದರೆ ಅಧಿಕಾರದ ಕೇಂದ್ರ ಎಂಬ ಪರಿಕಲ್ಪನೆಗೆ ಬದಲು, ಇದು “ರಾಷ್ಟ್ರಸೇವೆಯ ತೀರ್ಥಕ್ಷೇತ್ರ” ಎಂಬ ಸಂದೇಶ ನೀಡಬೇಕು ಎಂದು ಸರ್ಕಾರ ಹೇಳಿದೆ.
ರಾಜಭವನ ಬದಲು ‘ಲೋಕಭವನ’: ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳ ಅಧಿಕೃತ ನಿವಾಸಗಳನ್ನು ಇದುವರೆಗೂ ರಾಜಭವನ ಎಂದು ಕರೆಯಲಾಗುತ್ತಿತ್ತು. ಇದು ವಸಾಹತುಶಾಹಿ ಮತ್ತು ರಾಜಕೀಯ ಅಧಿಕಾರದ ಸುಳಿವು ನೀಡುತ್ತದೆ ಎಂದು ಕೇಂದ್ರ ಗೃಹಮಂತ್ರಾಲಯ ಅಭಿಪ್ರಾಯ ವ್ಯಕ್ತಪಡಿಸಿ, ಅದನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡಲು ಸೂಚನೆ ನೀಡಿದೆ. ಈ ಹೆಸರಿನಲ್ಲಿ “ಜನರ ಸೇವೆಗೆ, ಜನರಿಗಾಗಿ” ಎಂಬ ತತ್ತ್ವ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.
ಸೆಂಟ್ರಲ್ ಸೆಕ್ರೆಟೇರಿಯಟ್ ಈಗ ‘ಕರ್ತವ್ಯ ಭವನ’ : ಕೇಂದ್ರ ಸರ್ಕಾರದ ಹೃದಯಸ್ಥಾನವಾದ ಸೆಂಟ್ರಲ್ ಸೆಕ್ರೆಟೇರಿಯಟ್ಗೆ ‘ಕರ್ತವ್ಯ ಭವನ’ ಎಂಬ ಹೆಸರು ನೀಡಲಾಗಿದೆ. ಸರ್ಕಾರದ ಪ್ರಕಾರ, ಇದು ಅಧಿಕಾರವಲ್ಲ, ಜವಾಬ್ದಾರಿ ಮತ್ತು ಕರ್ತವ್ಯವೇ ಆಡಳಿತದ ಮೂಲವೆಂಬ ಸಂದೇಶ ನೀಡುವ ಹೆಸರಾಗಿದೆ.
‘ರಾಜಪಥ’ದಿಂದ ‘ಕರ್ತವ್ಯ ಪಥ’ವರೆಗೆ: 2022ರಲ್ಲಿ ರಾಜಪಥದ ಹೆಸರನ್ನು ಕರ್ತವ್ಯ ಪಥವೆಂದು ಬದಲಾಯಿಸುವುದು ಕೇವಲ ಹೆಸರಿನ ಬದಲಾವಣೆಯಲ್ಲ, ಆಡಳಿತದ ಮನೋಭಾವ ಬದಲಿಸುವ ಪ್ರಯತ್ನವೂ ಆಗಿತ್ತು. “ರಾಜ” ಎಂದರೆ ಅಧಿಕಾರದ ಪ್ರಾಬಲ್ಯ; “ಕರ್ತವ್ಯ” ಎಂದರೆ ಜವಾಬ್ದಾರಿಯ ಸಂಕೇತ. ಮರುನಾಮಕರಣ ವೇಳೆ ಪ್ರಧಾನಿ ಮೋದಿ, “ಸಂಸದರಿಗೂ ಸಚಿವರಿಗೂ ಅಧಿಕಾರವಲ್ಲ, ಕರ್ತವ್ಯ ಮುಖ್ಯ” ಎಂದು ಸಂದೇಶ ಕೊಟ್ಟಿದ್ದರು.
ರೇಸ್ ಕೋರ್ಸ್ ರೋಡ್ ಬದಲು ‘ಲೋಕ್ ಕಲ್ಯಾಣ ಮಾರ್ಗ’ : 2016ರಲ್ಲಿ ಪ್ರಧಾನಿ ನಿವಾಸಕ್ಕೆ ಸೇರಿದ ರೇಸ್ ಕೋರ್ಸ್ ರೋಡ್ ಹೆಸರನ್ನು ಲೋಕ್ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಯಿತು. ಇದು “ನಾಯಕನ ನಿವಾಸವು ಜನಕಲ್ಯಾಣದ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು” ಎಂಬ ತತ್ವವನ್ನು ಬಲಪಡಿಸಿತು.
ಈ ಬದಲಾವಣೆಗಳು ಮೇಲ್ಮೈಯ ಹೆಸರಿನ ಬದಲಾವಣೆಯಷ್ಟೇ ಅಲ್ಲ, ಇದು ಭಾರತೀಯ ಆಡಳಿತ ವ್ಯವಸ್ಥೆ ಅಧಿಕಾರದ ಎತ್ತರದ ಅಹಂನಿಂದ ಜನಸೇವೆಯ ಕಡೆಗೆ ಇಳಿಯುವ ಸೈದ್ಧಾಂತಿಕ ಪರಿವರ್ತನೆಯನ್ನು ಸೂಚಿಸುತ್ತದೆ. ಸ್ಥಾನಮಾನಕ್ಕಿಂತ ಸೇವೆ, ಅಧಿಕಾರಕ್ಕಿಂತ ಕರ್ತವ್ಯ ಎಂಬ ಮೌಲ್ಯಗಳನ್ನು ಆಧುನಿಕ ಭಾರತ ಅಳವಡಿಸಿಕೊಳ್ಳಬೇಕೆಂಬುವುದೇ ಈ ಮರುನಾಮಕರಣಗಳ ಮೂಲ ಸಂದೇಶ.