ನವದೆಹಲಿ, ಡಿ. 02 (DaijiworldNews/TA): ಬಿಯರ್ ಅನೇಕರಿಗೆ ಪ್ರತಿ ಸಮಾರಂಭಗಕ್ಕೂ ಒಲವಿನ ಸಂಗಾತಿ ಇದ್ದಂತೆ. ಬಹುತೇಕರು ಬಿಯರ್ ಪ್ರಿಯರು ಕೂಡಾ. ಆದ್ರೆ ನೀವು ಕಿಕ್ ಪಾನೀಯ ಕುಡಿಯೋ ಮೊದಲು ಬಾಟಲಿಯ ಮುಚ್ಚಳವನ್ನೊಮ್ಮೆ ಗಮನಿಸಿದ್ದೀರಾ? ಇಲ್ಲಾಂದ್ರೆ ಈ ಸ್ಟೋರಿಯನ್ನೊಮ್ಮೆ ಪೂರ್ತಿ ಓದಿ, ಮುಂದೆ ಬಾಟಲಿ ಓಪನ್ ಮಾಡೋ ಮುಂಚೆ ಅಂಚುಗಳ ಮೇಲೆ ನಿಮ್ಮ ದೃಷ್ಟಿ ಬೀಳೋದಂತು ಖಂಡಿತ.


ಸಾಮಾನ್ಯವಾಗಿ ಬಾಟಲಿಯನ್ನು ಓಪನರ್ನಿಂದ ಅಥವಾ ಕೆಲವರು ತಮ್ಮ ಹಲ್ಲುಗಳ ಸಹಾಯದಿಂದ ತೆಗೆಯುತ್ತಾರೆ. ಬಹುತೇಕ ಬಿಯರ್ ಪ್ರಿಯರು ತಮ್ಮ ಬಾಟಲಿ ತೆಗೆಯುವಾಗ ಅದರ ಮುಚ್ಚಳದ ಕುರಿತು ಹೆಚ್ಚಿನ ಗಮನ ನೀಡುವುದಿಲ್ಲ. ಆದರೆ ಈ ಬಿಯರ್ ಬಾಟಲಿಯ ಮುಚ್ಚಳದ ಹಿಂದೆ ಒಂದು ವಿಶಿಷ್ಟ ವಿಜ್ಞಾನ ಮತ್ತು ಐತಿಹಾಸಿಕ ರಹಸ್ಯ ಅಡಗಿದೆ.
ಹೌದು ಎಲ್ಲ ಬಿಯರ್ ಬಾಟಲಿಗಳಲ್ಲಿಯೂ 21 ಅಂಚುಗಳು ಇರುವುದನ್ನು ಗಮನಿಸಿದಿರಾ? ಇದು ಕೇವಲ ವಿನ್ಯಾಸಕ್ಕೋ, ಸುಂದರತೆಗಾಗಿ ಅಲ್ಲ, ಇದರ ಹಿಂದೆ 130 ವರ್ಷಗಳ ಹಿಂದಿನ ಇತಿಹಾಸವಿದೆ. ಈ ವಿನ್ಯಾಸವನ್ನು ಕಂಡುಹಿಡಿದವರು ವಿಲಿಯಂ ಪೇಂಟರ್. 1892 ರಲ್ಲಿ ಬಿಯರ್ ತಾಜಾತನ ಹಾಗು ಅದರ ಸುಗಂಧ ಉಳಿಸಿಕೊಳ್ಳಲು ಮತ್ತು ಅದರ ಕಾರ್ಬೊನೇಷನ್ ಕಳೆದುಕೊಳ್ಳದಂತೆ ಮಾಡಲು ಹಲವಾರು ಪ್ರಯೋಗಗಳನ್ನು ನಡೆಸಿದ್ದರು.
ಆ ಕಾಲದಲ್ಲಿ ಪ್ರಯೋಗಿಸಿದ ಹಲವಾರು ಮುಚ್ಚಳಗಳು ಸೋರಿಕೆಯಾಗುತ್ತಿದ್ದವು, ಇದರಿಂದ ಬಿಯರ್ ನಲ್ಲಿನ ಗ್ಯಾಸ್ ಸೋರಿಕೆಯಾಗಿ ಬಿಯರ್ ತಮ್ಮ ಹಿತಕರ ತಾಜಾತನವನ್ನು ಕಳೆದುಕೊಂಡು ಹೋಗುತ್ತಿದ್ದವು. ಪೇಂಟರ್ ಅವರು ಹಲವು ಪ್ರಯೋಗಗಳ ನಂತರ 21 ಅಂಚುಗಳ ವಿನ್ಯಾಸವನ್ನು ಕಂಡುಹಿಡಿದರು, ಇದು ಬಿಯರ್ ಬಾಟಲಿಯಲ್ಲಿನ ಒತ್ತಡವನ್ನು ಸಮತೋಲನವಾಗಿ ಹಿಡಿದಿಟ್ಟುಕೊಂಡಿತ್ತು, ಹೀಗಾಗಿ ಬಿಯರ್ ಕಾರ್ಬೊನೇಷನ್ ಉಳಿಯುತ್ತಿತ್ತು ಮತ್ತು ಸುಗಂಧಯುತವಾಗಿ ಹಾಗೂ ರುಚಿಕರವಾಗಿ ಕುಡಿಯಲು ಸಾಧ್ಯವಾಯಿತು ಎನ್ನಲಾಗಿದೆ.
ಈ 21 ಅಂಚುಗಳ ವಿನ್ಯಾಸವು ಸಾಮರ್ಥ್ಯ ಮತ್ತು ಸರಳತೆಯ ಅದ್ಭುತ ಸಂಯೋಜನೆಯಾಗಿದೆ. ಬಾಟಲ್ ಓಪನರ್ ಅಥವಾ ಕೈಯಿಂದ ಸುಲಭವಾಗಿ ತೆಗೆಯಬಹುದಾಗಿದ್ದು, ಒತ್ತಡದ ವಿರುದ್ಧ ಸರಿಯಾದ ಸಮತೋಲನವನ್ನು ಒದಗಿಸುತ್ತದೆ. ಅಂಚುಗಳ ಸರಿಯಾದ ನಿಯೋಜನೆಯಿಂದ ಬಾಟಲಿ ಮುಚ್ಚಳ ಬಲಿಷ್ಠವಾಗಿದ್ದು, ಬಾಟಲಿಯೊಳಗಿನ ಬಿಯರ್ ತಾಜಾ ಮತ್ತು ಕಾರ್ಬೊನೇಟ್ ಆಗಿಯೇ ಉಳಿಯುತ್ತದೆ.
130 ವರ್ಷಗಳಾದರೂ, ವಿಲಿಯಂ ಪೇಂಟರ್ ಕಂಡುಹಿಡಿದ ಈ ಆವಿಷ್ಕಾರ ಪ್ರಪಂಚದ ಎಲ್ಲಾ ಬಿಯರ್ ಕಂಪನಿಗಳಿಂದ ಅನುಸರಿಸಲಾಗುತ್ತಿದೆ. ಬಿಯರ್ ಬಾಟಲಿಯ ಮುಚ್ಚಳವು ಕೇವಲ ಪ್ಯಾಕೇಜಿಂಗ್ ಅಥವಾ ಆಕರ್ಷಕ ವಿನ್ಯಾಸವಲ್ಲ, ಆದರೆ ಅದರ ಹಿಂದಿನ ವೈಜ್ಞಾನಿಕ ತತ್ವವು ಬಿಯರ್ನ ತಾಜಾತನವನ್ನು, ಸುವಾಸನೆ ಮತ್ತು ಸವಿಯನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.
ಆದ್ದರಿಂದ, ಮುಂದಿನ ಬಾರಿ ನೀವು ಬಿಯರ್ ಕುಡಿಯುವಾಗ, ಬಾಟಲಿಯ ಮುಚ್ಚಳದ 21 ಅಂಚುಗಳನ್ನು ಗಮನಿಸಿ. ಇದು ಕೇವಲ ಸುಂದರ ವಿನ್ಯಾಸವಲ್ಲ, 130 ವರ್ಷಗಳ ವೈಜ್ಞಾನಿಕ ಪರಂಪರೆಯುಳ್ಳ ಐತಿಹಾಸಿಕ ಆವಿಷ್ಕಾರವಾಗಿದೆ. ಬಾಟಲಿ ತೆಗೆಯುವ ಪ್ರತಿ ಕ್ಷಣವೂ, ಈ ವೈಜ್ಞಾನಿಕ ಮತ್ತು ಐತಿಹಾಸಿಕ ಕಥೆಯನ್ನು ನೆನಪಿಗೆ ತರುತ್ತದೆ, ಮತ್ತು ಬಿಯರ್ ಕುಡಿಯುವ ಅನುಭವವನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತದೆ.