ಚಂಡೀಗಢ, ಡಿ. 02 (DaijiworldNews/AA): ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರ ಇಂದ್ರಪ್ರೀತ್ ಸಿಂಗ್ ಅಲಿಯಾಸ್ ಪರ್ರಿ (35) ಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಚಂಡೀಗಢದ ಸೆಕ್ಟರ್ 26ರ ಟಿಂಬರ್ ಮಾರ್ಕೆಟ್ ಬಳಿ ಸಂಭವಿಸಿದೆ.

ಘಟನೆ ಬಳಿಕ ಪರ್ರಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಪರ್ರಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗ್ಯಾಂಗ್ ವಾರ್ನಿಂದಾಗಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಪರ್ರಿ ಸೋಮವಾರ ಸಂಜೆ ಎಸ್ಯುವಿ ಕಾರಿನಲ್ಲಿ ಖಾಸಗಿ ಕ್ಲಬ್ನಿಂದ ಹೊರಟಿದ್ದ. ಈ ವೇಳೆ ಆತನ ಜೊತೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದ. ಆದರೆ ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಾಹನವು ಸ್ವಲ್ಪ ದೂರ ಚಲಿಸಿದ ಕೂಡಲೇ, ಪರ್ರಿ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಪರ್ರಿ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಬಳಿಕ ಆ ವ್ಯಕ್ತಿ ಕಾರಿನಿಂದ ಕೆಳಗಿಳಿದು ಮತ್ತೆ ಪರ್ರಿ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪರ್ರಿ ಕಾರನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಕಾರು ಅಲ್ಲಿಗೆ ಬಂದಿದೆ. ಪರ್ರಿ ಸಾವನ್ನು ಖಚಿತಪಡಿಸಿಕೊಂಡ ನಂತರ ಆ ವ್ಯಕ್ತಿ ಮತ್ತೊಂದು ಕಾರು ಹತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.