ನವದೆಹಲಿ, ನ. 28 (DaijiworldNews/AA): ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾಕ್ಕೆ ಭಾರತ "ಆಪರೇಷನ್ ಸಾಗರ್ ಬಂಧು" ಅಡಿಯಲ್ಲಿ ಮೊದಲ ಹಂತದ ಪರಿಹಾರ ಸಾಮಗ್ರಿಗಳು ಮತ್ತು ಹೆಚ್ಎಡಿಆರ್ ಬೆಂಬಲವನ್ನು ರವಾನಿಸಿದೆ. ದಿತ್ವಾ ಚಂಡಮಾರುತದಿಂದ ಶ್ರೀಲಂಕಾದಲ್ಲಿ ಸಂಭವಿಸಿದ ಜೀವಹಾನಿಗೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿ ಹದಗೆಟ್ಟರೆ ಹೆಚ್ಚಿನ ನೆರವು ಮತ್ತು ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ದಿತ್ವಾ ಚಂಡಮಾರುತದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಪ್ರಾಣ ಕಳೆದುಕೊಂಡವರ ಕುಟುಂಬಗಳ ಸುರಕ್ಷತೆ ಮತ್ತು ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ನಮ್ಮ ಹತ್ತಿರದ ಕಡಲ ನೆರೆಯವರೊಂದಿಗೆ ಭಾರತವು ಸದಾ ನಿಲ್ಲುತ್ತದೆ. ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಭಾರತ ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ ಹೆಚ್ಎಡಿಆರ್ ಬೆಂಬಲವನ್ನು ತುರ್ತಾಗಿ ರವಾನಿಸಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ನೆರವು ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಾಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಐಎನ್ಎಸ್ ವಿಕ್ರಾಂತ್ ಮತ್ತು ಐಎನ್ಎಸ್ ಉದಯಗಿರಿ ಮೂಲಕ ಶ್ರೀಲಂಕಾಕ್ಕೆ ಕಳುಹಿಸಲಾದ ಪರಿಹಾರ ನೆರವಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರವಾಹ ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾರತೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ನಿಯೋಜಿಸಲಾಗುವುದು ಎಂದು ಭಾರತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿತ್ವಾ ಚಂಡಮಾರುತವು ಶ್ರೀಲಂಕಾ ಕರಾವಳಿಗೆ ಅಪ್ಪಳಿಸಿದೆ. ಇದರಿಂದ 56 ಜನ ಸಾವನ್ನಪ್ಪಿದ್ದಾರೆ. ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಶ್ರೀಲಂಕಾದಲ್ಲಿ 21 ಜನರು ಕಾಣೆಯಾಗಿದ್ದಾರೆ. ಕಳೆದ 72 ಗಂಟೆಗಳಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ದ್ವೀಪದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಕನಿಷ್ಠ 56 ಜನ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.