ಬೆಂಗಳೂರು, ನ. 28 (DaijiworldNews/ AK): ಕರ್ನಾಟಕದಲ್ಲಿ ಸರ್ವ ಚಟುವಟಿಕೆ ನಿಂತು ಹೋಗಿದೆ. ಅಧಿಕಾರ ದಾಹದ ಕಾಂಗ್ರೆಸ್ ನಾಟಕದಲ್ಲಿ ಕರ್ನಾಟಕದ ಜನರ ಪರಿಸ್ಥಿತಿ ಬಹಳ ಹದಗೆಟ್ಟಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಒಂದು ಕಡೆ ರೈತರ ಸಮಸ್ಯೆ ಹೆಚ್ಚಾಗಿದೆ. ಇನ್ನೊಂದು ಕಡೆ ದಲಿತರ ಸಮಸ್ಯೆಗಳೂ ಹೆಚ್ಚಾಗಿವೆ. ದಲಿತರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು. 7 ಅಭಿವೃದ್ಧಿ ನಿಗಮಗಳಿದ್ದು ಮೂರು ಕಾಸೂ ಬಿಡುಗಡೆ ಆಗಿಲ್ಲ ಎಂದು ಟೀಕಿಸಿದರು.
ಈ ಸಮಸ್ಯೆಗಳನ್ನು ಕೇಳುವಂಥವರು ಇಲ್ಲವಾಗಿದೆ. ನಾವು ಹೋರಾಟ ಮಾಡಿದರೂ ಪ್ರಯೋಜನ ಆಗಿಲ್ಲ; ದಲಿತ ಸಮುದಾಯದ ಯುವಕರು ಬೀದಿಬೀದಿಯಲ್ಲಿ ಅಲೆಯುತ್ತಿದ್ದಾರೆ. ದಲಿತ ಕಾರ್ಮಿಕರಿಗೆ ಕೆಲಸ ಇಲ್ಲ. ನಿಗಮಗಳಿಗೆ ಅಲೆದು ಅಲೆದು ಮನೆ ಸೇರುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಅವರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿ ಹಣ ಇವತ್ತು ಅವರ ಕೈ ಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತಪರ ಹೋರಾಟಕ್ಕೆ ತಡೆ ಒಡ್ಡಿದ್ದ ಕಾಂಗ್ರೆಸ್ ನಾಯಕರು
ನಾನು ಹೋರಾಟ ಮಾಡುವಾಗ ಕಾಂಗ್ರೆಸ್ಸಿನ ದಲಿತ ನಾಯಕರು ತಡೆ ಒಡ್ಡಿದ್ದರು. ಕಾಂಗ್ರೆಸ್ ಪಕ್ಷ, ಸರಕಾರದ ಪರವಾಗಿ ಮಾಡನಾಡಿದ್ದರು. ದಲಿತರಿಗೆ ಅನ್ಯಾಯವಾದರೂ ನೋಡಿ ಕಾಂಗ್ರೆಸ್ಸಿನ ತೀರ್ಮಾನಕ್ಕೆ ಅವರು ಬೆಲೆ ಕೊಡುತ್ತಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ಅವರು ದೂರಿದರು.