ಬುಲಂದ್ಶಹರ್, ನ. 28 (DaijiworldNews/AA): ಮದುವೆ ಸಮಾರಂಭದಲ್ಲಿ ಜೋಶ್ ತುಂಬಲು ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ನಲ್ಲಿ ನಡೆದಿದೆ.

ಧರ್ಮೇಂದ್ರ ಭಾಟಿ(36) ಮೃತ ದುರ್ದೈವಿ.
ಚೋಳ ಪ್ರದೇಶದ ಖಾನ್ಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಸಂಭ್ರಮದ ವೇಳೆ ಆರೋಪಿ ಸುಗ್ರೀವ್ ಪರವಾನಗಿ ಪಡೆದ ಪಿಸ್ತೂಲ್ ಬಳಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆತ ಹಾರಿಸಿದ ಗುಂಡು ಧರ್ಮೇಂದ್ರ ಭಾಟಿ ಅವರಿಗೆ ತಗುಲಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಧರ್ಮೇಂದ್ರ ಅವರನ್ನು ತಕ್ಷಣ ನೋಯ್ಡಾದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಸಂತ್ರಸ್ತರ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಆರೋಪಿಗಳನ್ನು ಬಂಧಿಸಲು ಮತ್ತು ಘಟನೆಯಲ್ಲಿ ಬಳಸಲಾದ ಪರವಾನಗಿ ಪಡೆದ ಬಂದೂಕನ್ನು ವಶಪಡಿಸಿಕೊಳ್ಳಲು ಪೊಲೀಸ್ ತಂಡ ನಿಯೋಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.