ಲಖನೌ, ನ. 28 (DaijiworldNews/ TA): ಸಂಭ್ರಮದಿಂದ ಸಾಗುತ್ತಿದ್ದ ಮದುವೆ ಆರತಕ್ಷತೆ ಕ್ಷಣಾರ್ಧದಲ್ಲಿ ಆತಂಕದ ಮನೆಯಾಯಿತು. ಉತ್ತರ ಪ್ರದೇಶದ ಬಿಲ್ಲಿಯಾ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮದ ವೇಳೆ, ನವ ಜೋಡಿಗೆ ಶುಭಕೋರಲು ವೇದಿಕೆ ಮೇಲೆ ಹತ್ತಿದ್ದ ಬಿಜೆಪಿ ನಾಯಕರು, ಕುಟುಂಬಸ್ಥರು ಮತ್ತು ಅತಿಥಿಗಳ ತೂಕಕ್ಕೆ ವೇದಿಕೆ ಕುಸಿದು ಬಿದ್ದು ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಘಟನೆಯಲ್ಲಿ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಬಿಜೆಪಿ ಮುಖಂಡ ಅಭಿಷೇಕ್ ಸಿಂಗ್ ‘ಎಂಜಿನೀಯರ್’ ಅವರ ಸಹೋದರನ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ವೇದಿಕೆಗೆ ಹತ್ತಿದ್ದ ಹಲವು ಬಿಜೆಪಿ ನಾಯಕರಲ್ಲಿ, ಮಾಜಿ ಸಂಸದ ಭಾರತ್ ಸಿಂಗ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಸಿಂಗ್, ಜೊತೆಗೆ ಅಭಿಷೇಕ್ ಸಿಂಗ್ ಸ್ವತಃ ಉಪಸ್ಥಿತರಿದ್ದರು. ನವ ಜೋಡಿಗೆ ಶುಭ ಹಾರೈಸಿ ಫೋಟೋ ತೆಗೆದುಕೊಳ್ಳುವ ವೇಳೆಯಲ್ಲಿ, ವೇದಿಕೆ ಅಚಾನಕಾಗಿ ಕುಸಿದಿದೆ.
ಘಟನೆಯ ಪರಿಣಾಮವಾಗಿ ಹಿರಿಯ ಬಿಜೆಪಿ ನಾಯಕರು ತೀವ್ರವಾಗಿ ಗಾಯಗೊಂಡಿದ್ದು, ಇತರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನವ ಜೋಡಿ ಕೂಡ ಈ ಅವಘಡದಲ್ಲಿ ಕೆಳಕ್ಕೆ ಬಿದ್ದರೂ, ಅವರಿಗೆ ಗಂಭೀರವಾದ ಗಾಯಗಳು ಆಗಲಿಲ್ಲ. ವೇದಿಕೆ ಕುಸಿದ ಕೂಡಲೇ ಕುಟುಂಬಸ್ಥರು, ಅತಿಥಿಗಳು ಮತ್ತು ಸ್ಥಳದಲ್ಲಿದ್ದ ಸಿಬ್ಬಂದಿ ರಕ್ಷಣೆಗಾಗಿ ಧಾವಿಸಿ, ಗಾಯಗೊಂಡವರನ್ನು ಎತ್ತಿ ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಿದರು. ನವ ಜೋಡಿ ಆಸ್ಪತ್ರೆ ತೆರಳುವುದು ಶುಭಸಮಯದಲ್ಲಿ ಸೂಕ್ತವಲ್ಲ ಎನ್ನುವ ಕಾರಣಕ್ಕೆ, ಮಂಟಪದಲ್ಲಿಯೇ ವೈದ್ಯಕೀಯ ನೆರವು ಒದಗಿಸಲಾಗಿದೆ. ಆದರೆ ಕೆಲ ಬಿಜೆಪಿ ನಾಯಕರು ಮುನ್ನೆಚ್ಚರಿಕೆಯಾಗಿ ಆಸ್ಪತ್ರೆಗೆ ತೆರಳಿದ್ದಾರೆ.
ವೇದಿಕೆ ಕುಸಿತದ ನಂತರ, ಅತಿಥಿಗಳು ಮತ್ತು ಕುಟುಂಬಸ್ಥರು ಈವೆಂಟ್ ಆಯೋಜಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೇದಿಕೆ ಬಲಿಷ್ಠವಾಗಿ ನಿರ್ಮಿಸಲಾಗಿಲ್ಲ, ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗಿಲ್ಲ, ಅನಾಹುತ ಸಂಭವಿಸಿದರೆ ಅದರ ಹೊಣೆ ಯಾರು ಎಂದು ಪ್ರಶ್ನಿಸುತ್ತಾ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಲ್ಲಿಯಾ ಮದುವೆ ವೇದಿಕೆ ಕುಸಿತದ ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮ ಆಯೋಜಕರ ಜವಾಬ್ದಾರಿತನದ ಬಗ್ಗೆ ಸಾಮಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.