ಬೆಂಗಳೂರು, ನ. 28 (DaijiworldNews/ TA): ಉಪ್ಪಿಟ್ಟು ಎಂಬ ಪ್ರಸಿದ್ಧ ದಕ್ಷಿಣ ಭಾರತದ ತಿಂಡಿ ಈಗ ಹಲವು ಹೆಸರುಗಳಿಂದ ವಿಭಿನ್ನ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಈ ರುಚಿಕರ ಖಾದ್ಯಕ್ಕೆ ಉಪ್ಮಾ, ಸಜ್ಜಿಗೆ ಹೀಗೆ ಅನೇಕ ನಾಮಕರಣಗಳಿವೆ. ಉಪ್ಪಿಟ್ಟು ತಿಂದೂ ತಿಂದೂ ಬೇಸರವಾಗಿ ಉಪ್ಪಿಟ್ಟು ಎಂದರೆ ಬೇಡಪ್ಪಾ ಬೇಡ ಎನ್ನುವವರು ಎಷ್ಟು ಮಂದಿ ಇದ್ದಾರೆಯೋ, ಅಷ್ಟೇ ಮಂದಿ ಈ ತಿಂಡಿಯನ್ನು ಪ್ರೀತಿಸುವವರೂ ಇದ್ದಾರೆ.

ಹಾಗಿದ್ರೆ ಈ ಉಪ್ಪಿಟ್ಟು ಹುಟ್ಟಿಕೊಂಡದ್ದು ಹೇಗೆ? ಇದರ ಇತಿಹಾಸವೇನು? ಇದಕ್ಕೆ ಈ ಹೆಸರು ಬರಲು ಕಾರಣವೇನು? ಇದರ ಹಿಂದಿದೆ ರೋಚಕ ಕಹಾನಿ. ರೇಡಿಯೋಸಿಟಿ ಕನ್ನಡದ ಆರ್ಜೆ ಕಿರಣ್ ಹೆಬ್ಬಾಳೆ ಅವರು ಇದರ ರೋಚಕ ಸ್ಟೋರಿಯನ್ನು ಹೇಳಿದ್ದಾರೆ.
ಒಂದು ಕಾಲದಲ್ಲಿ ಇದೊಂದು ವಿಧವೆಯರ ಆಹಾರವಾಗಿತ್ತಂತೆ. ವಿಧವೆಯರು ತಮ್ಮ ಗಂಡನ ಮರಣದ ನಂತರ ಸಮಾಜದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಆ ಸಮಯದಲ್ಲಿ ಹೆಣ್ಣುಮಕ್ಕಳನ್ನು ಬೇರೆ ಗಂಡನ ಕಡೆ ಆಕರ್ಷಣೆಯಾಗದಂತೆ, ಅವರನ್ನು ದೂರದಲ್ಲಿ ಇಟ್ಟುಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ, ಉಪ್ಪು, ಹುಳಿ ಮತ್ತು ಖಾರ ಹಾಕಿ ಬಿಸಿನೀರಿನಲ್ಲಿ ಹಿಟ್ಟು ಮಾಡಿದ ಆಹಾರವನ್ನು ವಿಧವೆಯರಿಗೆ ನೀಡಲಾಗುತ್ತಿತ್ತು. ಈ ಆಹಾರವೇ ಉಪ್ಪಿಟ್ಟಿನ ಮೊದಲ ರೂಪವೆಂದು ಕೆಲವರು ಹೇಳುತ್ತಾರೆ.
ಇದರಲ್ಲಿ ಇನ್ನೊಂದು ಮನೋಹರ ಅಂಶ ಇದೆ. ಮತ್ತೊಂದು ಕಥೆಯ ಪ್ರಕಾರವಾಗಿ ಲಕ್ಷಮ್ಮ ಪಾಟಿ ಎನ್ನುವ ಮಹಿಳೆ ತನ್ನ ನೌಕರ ಮಗನಿಗೆ ಬಿಸಿನೀರಿನಲ್ಲಿ ಸ್ವಲ್ಪ ಉಪ್ಪು, ಹುಳಿ, ಖಾರ, ತೆಂಗಿಯ ತುರಿ ಹಾಕಿ ಆಹಾರ ತಯಾರಿಸಿದರು. ಆ ರುಚಿಯನ್ನು ಕಚೇರಿಯಲ್ಲಿ ಎಲ್ಲರಿಗೂ ಹಂಚಿದಾಗ, ಎಲ್ಲರ ಮೆಚ್ಚುಗೆ ತಂದುಕೊಟ್ಟಿತು. ಹೀಗಾಗಿ, ಈ ತಿಂಡಿ ಪ್ರೀತಿಗೆ ಪಾತ್ರವಾಯಿತು ಮತ್ತು ನಂತರ ಪ್ರಸಿದ್ಧಿಯಾಯಿತು ಎನ್ನಲಾಗಿದೆ.
ಇದಾದ ಬಳಿಕ ಉಪ್ಪಿಟ್ಟು ವಿವಿಧ ಪ್ರದೇಶಗಳಲ್ಲಿ “ಉಪ್ಪಿಂಡಿ”, “ಖಾರಾ ಭಾತ್” ಅಥವಾ “ಉಪ್ಮಾ” ಎಂಬ ಹೆಸರಿನಲ್ಲಿ ಜನಪ್ರಿಯವಾಗಿದೆ. ಕರ್ನಾಟಕ, ತಮಿಳುನಾಡು ಮತ್ತು ತೆಲುಗು ರಾಜ್ಯಗಳಲ್ಲಿ ಇದು ಪ್ರಿಯ ಉಪಾಹಾರವಾಗಿ ಪರಿಗಣಿಸಲಾಗಿದೆ. ಈ ತಿಂಡಿಯ ಹಿಂದಿನ ಕಥೆ ತಿಳಿದುಕೊಳ್ಳುವುದು ಮಾತ್ರವಲ್ಲ, ಅದರ ಸಾಂಸ್ಕೃತಿಕ ಮಹತ್ವವನ್ನು ಕೂಡ ಅರಿಯಲು ಸಹಾಯ ಮಾಡುತ್ತದೆ.