ನವದೆಹಲಿ, ನ. 28 (DaijiworldNews/AA): ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಭಾರತ ಭೇಟಿಯ ಸಮಯದಲ್ಲಿ ಪುಟಿನ್ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಡಿಸೆಂಬರ್ 5ರಂದು ನಡೆಯುವ 23 ನೇ ಭಾರತ-ರಷ್ಯಾ ಸಮ್ಮೇಳನದಲ್ಲಿ ಮೋದಿ ಹಾಗೂ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಎರಡು ದೇಶಗಳ ಸಂಬಂಧಗಳು ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಈ ಸಮ್ಮೇಳನವು 23ನೇ ಸಭೆಯಾಗಿದ್ದು, ಇಲ್ಲಿಯವರೆಗೂ ಭಾರತ ಹಾಗೂ ರಷ್ಯಾ ನಡುವೆ 22 ಮಾತುಕತೆಗಳು ನಡೆದಿವೆ. ಇದು ರಾಜಕೀಯ, ಆರ್ಥಿಕ, ರಕ್ಷಣೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಬಾಂಧವ್ಯವನ್ನು ಪರಿಶೀಲಿಸುತ್ತದೆ. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ಮೇಲೆ ಭಾರೀ ಸುಂಕ ವಿಧಿಸಿರುವುದರಿಂದ ಪುಟಿನ್ ಅವರ ಭಾರತ ಭೇಟಿ ಮಹತ್ವದ್ದಾಗಿದೆ.