ಮಹಾರಾಷ್ಟ್ರ, ನ. 28 (DaijiworldNews/ TA): ಶಾಲೆ ಅಂದಾಕ್ಷಣ ನೆನಪಾಗೋದು ಭಾರವಾದರೂ ಹೊರಲೇ ಬೇಕಾದ ಒಂದಷ್ಟು ಪುಸ್ತಕಗಳಿರುವ ಬ್ಯಾಗ್, ಕೈಯಲ್ಲೊಂದು ಕರಿಹಲಗೆ , ಮನಸ್ಸಿಲ್ಲದ ಮನಸ್ಸಿನಲ್ಲೂ ಮಂದಹಾಸ ಬೀರಿ ಹೆಜ್ಜೆ ಹಾಕೋ ಮುಗ್ಧ ಮನಸ್ಸುಗಳು. ಆದ್ರೆ ಈ ಶಾಲೆ ಮಾತ್ರ ಸಂಪೂರ್ಣ ವಿಶೇಷ. ಮುಖದಲ್ಲೇನೋ ನಗು ನೋಡಬಹುದು ಆದ್ರೆ ಅಭ್ಯಾಸ ಮಾಡೋರು ಮಾತ್ರ ಬೆಳೆಯೋ ಕಂದಮ್ಮಗಳಲ್ಲ, ಮನೆಯ ಜವಾಬ್ದಾರಿಯ ಪಾಠ ಅರಿತ ಇಳಿವಯಸ್ಸಿನ ಮನಸ್ಸುಗಳು.

ಹೌದು ಮಹಾರಾಷ್ಟ್ರದ ಫಂಗೇನ್ ಗ್ರಾಮದಲ್ಲಿ 60 ರಿಂದ 90 ವಯಸ್ಸಿನ ಮಹಿಳೆಯರಿಗೆ ವಿಶೇಷವಾಗಿ ನಿರ್ಮಿಸಿದ ‘ಆಜಿಬೈಚಿ ಶಾಲಾ’ ಆರಂಭವಾಗಿದೆ. ಈ ಶಾಲೆ, ವಯಸ್ಸಾದ ಅಜ್ಜಿಯರಿಗೆ ಅಕ್ಷರ ಕಲಿಕೆಯನ್ನು ಒದಗಿಸುವ ಭಾರತದ ಮೊದಲ ಶಾಲೆಯಾಗಿದ್ದು, ಕಳೆದ ಬಾಲ್ಯದಲ್ಲಿ ವಿದ್ಯೆ ಪಡೆಯಲು ಅವಕಾಶದಿಂದ ವಂಚಿತರಾದ ಮಹಿಳೆಯರನ್ನು ಹೊಸಜೀವನದತ್ತ ಮುನ್ನಡೆಸುತ್ತಿರುವ ಅಭ್ಯಾಸ ಮಂಟಪ. ಇಲ್ಲಿ ಶಾಲೆಗೆ ಬರುವ ಅಜ್ಜಿಯರು ಗುಲಾಬಿ ಬಣ್ಣದ ಸೀರೆ ಧರಿಸಿ, ಸ್ಕೂಲ್ ಬ್ಯಾಗ್ ಹೊತ್ತು, ಮಗುವಿನಂತೆ ಉತ್ಸಾಹದಿಂದ ಮುಂದೆ ಬರುತ್ತಾರೆ.
ಈ ಶಾಲೆಯನ್ನು ಮಾರ್ಚ್ 8, 2016ರಂದು ಅಂತರರಾಷ್ಟ್ರೀಯ ಮಹಿಳಾ ದಿನದಂದು ಆರಂಭಿಸಲಾಗಿದೆ. 28 ಅಜ್ಜಿಯರಿಗೆ ಆರಂಭಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಮೋತಿಲಾಲ್ ದಲಾಲ್ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀ ಯೋಗೇಂದ್ರರ ಸಹಾಯದಿಂದ ಸ್ಥಾಪಿಸಲಾಯಿತು. ಶಾಲೆಯ ಉದ್ದೇಶ, ವೃದ್ಧ ಮಹಿಳೆಯರನ್ನು ಸ್ವಾವಲಂಬಿ, ಅಕ್ಷರಸಿದ್ಧ ಮತ್ತು ಸೃಜನಾತ್ಮಕ ವ್ಯಕ್ತಿಗಳನ್ನಾಗಿ ಮಾಡುವುದು. ಯಾವುದೇ ವಯಸ್ಸಿನ ಮಿತಿಯಿಲ್ಲದೆ ವಿದ್ಯೆ ಕಲಿಯಬಹುದೆಂಬ ಸಂದೇಶವನ್ನು ಈ ಶಾಲೆ ಸಾರುತ್ತದೆ.
ಅಜ್ಜಿಯರು ಪ್ರತಿದಿನ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಶಾಲೆಗೆ ಬರುತ್ತಾರೆ. ಇಲ್ಲಿಯ ಪಠ್ಯಕ್ರಮದಲ್ಲಿ ಓದು, ಬರವಣಿಗೆ, ಮೊಮ್ಮಕ್ಕಳೊಂದಿಗೆ ಕವಿತೆ ಓದು ಮತ್ತು ಅಕ್ಷರದ ಅಭ್ಯಾಸ ಸೇರಿದಂತೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳು ಮಾಡಲಾಗುತ್ತವೆ. ಅಕ್ಷರಗತ ಜ್ಞಾನದಿಂದ ಅಜ್ಜಿಯರು ಬ್ಯಾಂಕ್ ಅಥವಾ ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವತಂತ್ರವಾಗಿ ನಿರ್ವಹಿಸಬಲ್ಲವರಾಗಬೇಕೆಂಬುದು ಇದರ ಉದ್ದೇಶ. ಶಾಲೆಯಲ್ಲಿ ಅಕ್ಷರ ಕಲಿಕೆಯ ಜೊತೆಗೆ, ಅಜ್ಜಿಯರು ಗಿಡ ನೆಟ್ಟು ಅದರ ಪೋಷಣೆ ಮಾಡುವ ಮೂಲಕ ಪ್ರಕೃತಿಯೊಂದಿಗೆ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದಾರೆ.
ಫಂಗೇನ್ ಗ್ರಾಮದ ಮಹಿಳೆಯರಿಗೆ ವಿದ್ಯೆ ಕಲಿಕೆಯ ಅವಕಾಶ ಇಲ್ಲದಿದ್ದ ಸಮಯದಲ್ಲಿ, ಪುರುಷರು ಅಕ್ಷರಸ್ಥರಾಗಿದ್ದರೂ, ಮಹಿಳೆಯರು ಶಾಲೆಗೆ ಹೋಗದೇ, ಸಂಸಾರದ ಹೊಣೆ ಹೊತ್ತು ಬದುಕಿರಬೇಕು. ಆದರೆ ಈಗ ‘ಆಜಿಬೈಚಿ ಶಾಲಾ’ ಮೂಲಕ ಅಜ್ಜಿಯರು ಸಹಿ ಮಾಡಬಲ್ಲರು, ಓದು, ಬರವಣಿಗೆ ಮತ್ತು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲೆಗೆ ಬರುತ್ತಿದ್ದ ಅಜ್ಜಿಯರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಮನೆ ಕಛೇರಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ನಿರ್ವಹಿಸುತ್ತಿದ್ದಾರೆ.
ಈ ಅನುಭವವು, “ಮನಸ್ಸಿದ್ದರೆ ಯಾವ ವಯಸ್ಸಿನಲ್ಲಿಯೂ ಕಲಿಕೆ ಸಾಧ್ಯ” ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದೆ. ವೃದ್ಧರಾದ ಮಹಿಳೆಯರಿಗೆ ಕಲಿಕೆಯ ಅವಕಾಶ ಕಲ್ಪಿಸುವ ಈ ಶಾಲೆ, ಹಿರಿಯ ನಾಗರಿಕರಿಗೆ ಸಾಕ್ಷರತೆಯ ಹೊಸ ಪ್ರೇರಣೆಯಾಗಿ ರೂಪಾಂತರವಾಗಿದೆ.