ನವದೆಹಲಿ, ನ. 28 (DaijiworldNews/ TA): ಹೈದರಾಬಾದ್ ಮೂಲದ ಸ್ಟಾರ್ಟ್ಅಪ್ ‘ಸ್ಕೈರೂಟ್ ಏರೋಸ್ಪೇಸ್’ ನಿರ್ಮಿಸಿರುವ ಭಾರತದ ಮೊದಲ ಖಾಸಗಿ ವಾಣಿಜ್ಯ ರಾಕೆಟ್ ವಿಕ್ರಂ–1 ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್ ರೀತಿಯಲ್ಲಿ ಅನಾವರಣಗೊಳಿಸಿದರು. ಜೊತೆಗೆ, ಸಂಸ್ಥೆಯ ನೂತನ ಮತ್ತು ಬೃಹತ್ ಕ್ಯಾಂಪಸ್ವನ್ನೂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೊದಲ ಬಾರಿಗೆ ‘ಜೆನ್–ಝೀ’ ಎಂಬ ಪದವನ್ನು ಬಳಸುತ್ತಾ, ರಾಕೆಟ್ ನಿರ್ಮಾಣದಲ್ಲಿ ತೊಡಗಿದ್ದ ಯುವ ಇಂಜಿನಿಯರ್ಗಳು, ವಿನ್ಯಾಸಕರು ಮತ್ತು ವಿಜ್ಞಾನಿಗಳ ಸೃಜನಶೀಲತೆಯನ್ನು ಮೆಚ್ಚಿಕೊಂಡರು.

“ಭಾರತದ ಜೆನ್–ಝೀ ಪೀಳಿಗೆಯವರು ಹೊಸತನಕ್ಕೆ ದಾರಿ ತೋರಿಸುತ್ತಿದ್ದಾರೆ. ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿರುವ ನಮ್ಮ ಯುವಕರನ್ನು ವಿಶ್ವದ ಜೆನ್–ಝೀಗಳು ಮಾದರಿಯಾಗಿ ನೋಡಬೇಕು” ಎಂದು ಅವರು ಹೇಳಿದರು.
ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯುವ ಐತಿಹಾಸಿಕ ನಿರ್ಧಾರವೇ ಇಂದಿನ ನವೀನ ಪರಿಸರಕ್ಕೆ ಕಾರಣವೆಂದ ಪ್ರಧಾನಿ, “ಈ ನೀತಿ ನಂತರ ಸ್ಕೈರೂಟ್ ಸೇರಿದಂತೆ ಸುಮಾರು 300 ಕಂಪನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಯುವಕರ ನವೋದ್ಯಮಶಕ್ತಿ, ಅಪಾಯ ನಿರ್ವಹಣಾ ಸಾಮರ್ಥ್ಯ ಮತ್ತು ಉದ್ಯಮಶೀಲತೆ ಈಗ ಭಾರತದ ಬಾಹ್ಯಾಕಾಶ ವಲಯವನ್ನು ಜಾಗತಿಕ ಹೂಡಿಕೆದಾರರ ಗಮನಕ್ಕೆ ತಂದುಕೊಂಡಿದೆ” ಎಂದು ಹೇಳಿದರು.
2 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಸ್ಕೈರೂಟ್ ಏರೋಸ್ಪೇಸ್ನ ಹೊಸ ಕ್ಯಾಂಪಸ್ನಲ್ಲಿ ರಾಕೆಟ್ಗಳ ವಿನ್ಯಾಸ, ಅಭಿವೃದ್ಧಿ, ಸಂಯೋಜನೆ ಮತ್ತು ಪರೀಕ್ಷೆಗಳನ್ನು ಒಂದೇ ಸ್ಥಳದಲ್ಲಿ ನಡೆಸುವ ವ್ಯವಸ್ಥೆಯಿದೆ. ಈ ಸೌಕರ್ಯವು ತಿಂಗಳಿಗೊಂದು ರಾಕೆಟ್ ನಿರ್ಮಿಸುವ ಸಾಮರ್ಥ್ಯ ಹೊಂದಿದೆ ಎಂದು ಸಹಸ್ಥಾಪಕ ನಾಗ ಭಾರತ್ ಡಾಕಾ ತಿಳಿಸಿದ್ದಾರೆ. ಸ್ಕೈರೂಟ್ ಈಗಾಗಲೇ 2022ರ ನವೆಂಬರ್ನಲ್ಲಿ ವಿಕ್ರಂ–ಎಸ್ ರಾಕೆಟ್ ಅನ್ನು ಉಡಾಯಿಸುವ ಮೂಲಕ, ರಾಕೆಟ್ ಹಾರಿಸಿದ ದೇಶದ ಮೊದಲ ಖಾಸಗಿ ಸಂಸ್ಥೆ ಎಂಬ ಮೈಲಿಗಲ್ಲು ದಾಖಲಿಸಿತ್ತು.