ಶಿವಮೊಗ್ಗ, ನ. 27 (DaijiworldNews/TA): ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು, ಪ್ರತಿ ವರ್ಷ ನೀಡುತ್ತಾ ಬರುತ್ತಿರುವ ರಾಷ್ಟ್ರಕವಿ ಕುವೆಂಪು ರಾಷ್ಟ್ರೀಯ ಪ್ರಶಸ್ತಿ-2025ಕ್ಕೆ ಕೊಂಕಣಿ ಭಾಷೆಯ ಪ್ರಸಿದ್ಧ ಬರಹಗಾರರಾದ ಮಹಾಬಲೇಶ್ವರ ಸೈಲ್ ಅವರು ಆಯ್ಕೆಯಾಗಿರುತ್ತಾರೆ. ಈ ಪ್ರಶಸ್ತಿಯು ರೂ.5 ಲಕ್ಷ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಡಿ.29ರಂದು ಕುವೆಂಪು ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಕುಪ್ಪಳ್ಳಿಯಲ್ಲಿ ನಡೆಯಲಿದೆ.

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ ಎಲ್ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಮಹಾಬಲೇಶ್ವರ ಸೈಲ್ ಅವರನ್ನು ಆಯ್ಕೆ ಮಾಡಲಾಯಿತು. ಗೋವಾಕ್ಕೆ ಸೇರಿದ ಹೆಸರಾಂತ ಸಮಕಾಲೀನ ಲೇಖಕರಾದ ಮಹಾಬಲೇಶ್ವರ್ ಸೈಲ್ ಅವರು ಕೊಂಕಣಿ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಮತ್ತು ಭಾರತೀಯ ಸಾಹಿತ್ಯಕ್ಕೆ ತಂದಿರುವ ವೈಶಿಷ್ಟ್ಯಪೂರ್ಣ ಸಮೃದ್ಧಿಯನ್ನು ಮನಗಂಡು, ಅವರಿಗೆ “ಕುವೆಂಪು ರಾಷ್ಟ್ರೀಯ ಪ್ರಶಸ್ತಿ - 2025” ಅನ್ನು ಏಕಮತದಿಂದ ಪ್ರದಾನ ಮಾಡಲು ಆಯ್ಕೆ ಸಮಿತಿಯು ನಿರ್ಧರಿಸಿದೆ.
ಮಹಾಬಲೇಶ್ವರ ಸೈಲ್ ಅವರು ಭಾರತೀಯ ಸೇನೆಯಲ್ಲಿದ್ದು, 1965ರ ಪಾಕ್ತಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದರು.ಅಲ್ಲದೇ ಇಸ್ರೇಲ್ ಮತ್ತು ಈಜಿಪ್ಟ್ ನಡುವಿನ ಗಡಿಯಲ್ಲಿ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ಸೇವಾ ನಿವೃತ್ತಿಯ ನಂತರ ಅಂಚೆ ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.ಇವರು ಪ್ರಸಿದ್ಧ ಕೊಂಕಣಿ ಲೇಖಕ ಹಾಗೂ ಅನುವಾದಕರಾಗಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವಗಳನ್ನು ಪಡೆದಿದ್ದಾರೆ.