ತಮಿಳುನಾಡು, ನ. 27 (DaijiworldNews/TA): ಈಗ ಝಣ ಝಣ ಕಾಂಚಾನಾದ್ದೇ ಕಾರುಬಾರು. ಹಣ ಕಂಡ್ರೆ ಹೆಣ ಕೂಡಾ ಬಾಯಿ ಬಿಡುತ್ತೆ ಅಂತಾರೆ. ಆದ್ರೆ ಇಲ್ಲಿ ಆ ಒಂದು ಮನೆಯಲ್ಲಿದ್ದ ಹಣ ಕಂಡು ಕಳ್ಳ ಮಾಲೀಕನಿಗೆ ಪತ್ರ ಬರೆದ ಘಟನೆ ನಡೆದಿದೆ. ಹೌದು ತಿರುನಲ್ವೇಲಿ ಜಿಲ್ಲೆಯ ಪಲಯಪೆಟ್ಟೈ ಪ್ರದೇಶದಲ್ಲಿ ನಡೆದ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಕಳ್ಳ ಮನೆಮಾಲೀಕರಿಗೆ ಪತ್ರ ಬರೆದಿಟ್ಟು ಹೋದ ಘಟನೆ ಇದೀಗ ನಗೆಪಾಟಲಿಗೀಡಾಗಿದೆ.

ಹೌದು ಮನೆಯಲ್ಲಿ ಹಣ, ಆಭರಣಗಳನ್ನು ಹುಡುಕಲು ನುಗ್ಗಿದ ಕಳ್ಳನು, ಹುಂಡಿಯಲ್ಲಿ ಕೇವಲ 2,000 ರೂ. ಮಾತ್ರ ಸಿಕ್ಕಿದುದರಿಂದ ಹತಾಶೆಗೊಂಡಿದ್ದಾನೆ. ಆ ಕಳ್ಳನು ನಿರಾಸೆಯಿಂದ ಮನೆಮಾಲೀಕರಿಗೆ ಪತ್ರ ಬರೆದಿದ್ದಾನೆ. ಪತ್ರದಲ್ಲಿ,“ಮನೆಯಲ್ಲೊಂದು ರೂಪಾಯಿ ಕೂಡ ಇಲ್ಲ, ಮುಂದಿನ ಬಾರಿ ಯಾರಾದರೂ ಕಳ್ಳತನಕ್ಕೆ ಬಂದರೆ, ನೀವು ಮೋಸ ಆಗದಂತೆ ಹಣವನ್ನು ಇಟ್ಟುಕೊಳ್ಳಿ” ಎಂಬ ಸಲಹೆಯನ್ನು ನೀಡಿದ್ದಾನೆ. ಜೊತೆಗೆ, ಮನೆಯ ಭದ್ರತಾ ವ್ಯವಸ್ಥೆಯನ್ನು ಟೀಕಿಸಿ, ಒಂದೇ ಒಂದು ರೂಪಾಯಿ ಹಣವಿಲ್ಲ, ಇಷ್ಟೊಂದು ಸಿಸಿಟಿವಿ ಕ್ಯಾಮೆರಾಗಳು ಏಕೆ? ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾನೆ.
ಆದರೂ ಖತರ್ನಾಕ್ ಕಳ್ಳ ಮುನ್ನೆಚ್ಚರಿಕೆಯಾಗಿ ಈ ಕೃತ್ಯವು ದಾಖಲಾಗದಂತೆ ನೋಡಿಕೊಳ್ಳಲು ಸಿಸಿಟಿವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಕದ್ದೋಯ್ದಿದ್ದಾನೆ. ಅಷ್ಟೇ ಅಲ್ಲದೆ, ಪತ್ರ ಬರೆದ ವೇಳೆಯ ಯಾವುದೇ ಪುರಾವೆಗಳನ್ನು ಬಿಟ್ಟಿಲ್ಲ ಎಂದು ಹೇಳಲಾಗಿದೆ.