ಬೆಂಗಳೂರು, ನ. 27 (DaijiworldNews/TA): ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕುರಿತು ಉದ್ಭವಿಸಿರುವ ಒಳಗದ್ದಲ ತೀವ್ರವಾಗಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ‘Please Wait’ ಎಂದು ಸಂದೇಶ ಕಳುಹಿಸಿದ ಕೆಲವೇ ಗಂಟೆಗಳ ಬಳಿಕ ಈ ಪೋಸ್ಟ್ ಹೊರಬಿದ್ದಿದೆ.

“ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ. Word Power is World Power. ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನಾಗಿರಲಿ ಆಡಿದ ಮಾತಿನಂತೆ ನಡೆದುಕೊಳ್ಳಬೇಕು” ಎಂದು ಬರೆದಿದ್ದಾರೆ.
ಈ ಹೇಳಿಕೆ ಕಾಂಗ್ರೆಸ್ನ ಇತ್ತೀಚಿನ ಆಂತರಿಕ ರಾಜಕೀಯ ಬೆಳವಣಿಗೆಗಳಿಗೆ ನೇರ ಸಂಬಂಧ ಹೊಂದಿದಂತೆ ಕಾಣುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ರಾಹುಲ್ ಗಾಂಧಿ ಜತೆ ಡಿಕೆ ಶಿವಕುಮಾರ್ ಸಹ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮಾತುಕತೆ ಗುಟ್ಟನ್ನು ಬಿಟ್ಟುಕೊಡದ ಡಿಕೆ ಶಿವಕುಮಾರ್, ‘ರಾಹುಲ್ ಗಾಂಧಿಯವರು ನನ್ನೊಂದಿಗೆ ಏನು ಸಂವಹನ ಮಾಡಿದ್ದಾರೆ ಎಂಬುದು ಮಾಧ್ಯಮದಲ್ಲಿ ಮಾತನಾಡುವ ವಿಚಾರವಲ್ಲ, ಹೇಳುವ ಅವಶ್ಯಕತೆಯೂ ಇಲ್ಲ’ ಎಂದಿದ್ದಾರೆ. ಆದರೆ, ತಮ್ಮ ಗುರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಸೀಟು ಪಡೆಯುವುದು ಮತ್ತು ದೇಶದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಮಾಡುವುದಾಗಿದೆ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ನಡೆದ ಸಭೆಗಳ ನಂತರ ಮತ್ತೆ ಇಂದು ನಗರಕ್ಕೆ ಬಂದಿದ್ದಾರೆ. ರಾಹುಲ್ ಗಾಂಧಿ ಜೊತೆ ಸುಮಾರು 25 ನಿಮಿಷ ನಡೆದ ದೂರವಾಣಿ ಸಂಭಾಷಣೆಯ ಬಳಿಕ ಅವರು, “ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ. ಹೈಕಮಾಂಡ್ ಒಟ್ಟಾಗಿ ತೀರ್ಮಾನ ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಕಳುಹಿಸಿದ ‘Please Wait’ ಸಂದೇಶ, ಖರ್ಗೆ ಅವರ ತುರ್ತು ಕಾರ್ಯಚಟುವಟಿಕೆಗಳು ಮತ್ತು ಶಿವಕುಮಾರ್ ಪ್ರಕಟಿಸಿದ "ಕೊಟ್ಟ ಮಾತು" ಪೋಸ್ಟ್, ಇವೆಲ್ಲವೂ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಮಾತುಕತೆ ಹೊಸ ಹಂತ ಸೇರಿರುವ ಸೂಚನೆ ನೀಡುತ್ತಿವೆ. ಶಿವಕುಮಾರ್ ತಮ್ಮ ಸಂದೇಶ ಯಾರಿಗೆ ಉದ್ದೇಶಿಸಿ ಬರೆದಿದ್ದಾರೆ ಎಂಬುದು ಈಗ ರಾಜಕೀಯ ವಲಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.