ಬೆಂಗಳೂರು, ನ. 26 (DaijiworldNews/TA): ರಾಜ್ಯ ರಾಜಕೀಯದಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆಯಾಗಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಗುಪ್ತವಾಗಿ ಭೇಟಿ ಮಾಡಿರುವುದು ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಚರ್ಚೆಗೆ ಮತ್ತೊಂದು ಬಲ ನೀಡಿದೆ. ಸಿದ್ದರಾಮಯ್ಯ ಆಪ್ತನಾಗಿ ಪರಿಗಣಿಸಲ್ಪಡುವ ಜಾರಕಿಹೊಳಿ ಅವರೊಂದಿಗೆ ನಡೆದ ಈ ರಹಸ್ಯ ಮಾತುಕತೆಯು ರಾಜಕೀಯ ವಲಯದಲ್ಲಿ ತೀವ್ರ ಗಮನ ಸೆಳೆದಿದೆ.

ಮೂಲಗಳ ಪ್ರಕಾರ, ನವೆಂಬರ್ 25ರ ರಾತ್ರಿ ನಡೆದ ಈ ಭೇಟಿಯಲ್ಲಿ, ಡಿ.ಕೆ. ಶಿವಕುಮಾರ್ ಅವರು ಜಾರಕಿಹೊಳಿ ಅವರಿಗೆ ‘ಹೈಕಮಾಂಡ್ ಸಿಎಂ ಸ್ಥಾನಕ್ಕೆ ನನ್ನ ಹೆಸರನ್ನು ಅಂತಿಮಗೊಳಿಸಿದರೆ ನಿಮ್ಮ ಸಂಪೂರ್ಣ ಬೆಂಬಲ ಬೇಕು’ ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಇದರೊಂದಿಗೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಡಿಸಿಎಂ ಆಗಿ ಮುಂದುವರೆಯುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
‘ಸಿದ್ದರಾಮಯ್ಯ ಬಿಟ್ಟು ಬರಲು ಆಗುವುದಿಲ್ಲ’ — ಜಾರಕಿಹೊಳಿ ಸ್ಪಷ್ಟ ನಿಲುವು :
ಶಿವಕುಮಾರ್ ಅವರ ಬೇಡಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟ ಉತ್ತರ ನೀಡಿರುವುದಾಗಿ ಮೂಲಗಳು ಹೇಳುತ್ತಿವೆ.
“ನಾವು ಸಿದ್ದರಾಮಯ್ಯ ಸರ್ ಅವರನ್ನು ಬಿಟ್ಟು ಬರೋದಿಲ್ಲ. ಯಾರನ್ನ ಮಾಡಬೇಕು, ಯಾರನ್ನ ಬೇಡ ಎಂದು ನಾವು ಹೇಳೋದಿಲ್ಲ. ಹೈಕಮಾಂಡ್ ಏನು ತೀರ್ಮಾನಿಸಿದರೂ ಅದಕ್ಕೆ ಬದ್ಧ” ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಭೇಟಿ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ : ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ಯಾವುದೇ ‘ಬದಲಾವಣೆ ಪರ್ವ’ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. “ಡಿಕೆಶಿ ಸಹಜವಾಗಿಯೇ ಎಲ್ಲರನ್ನು ಭೇಟಿ ಮಾಡ್ತಾರೆ. ನನ್ನನ್ನೂ ಭೇಟಿ ಮಾಡಿದ್ದಾರೆ. ಅದಕ್ಕೆ ಬೇರೆ ಅರ್ಥ ಕೊಡುವ ಅಗತ್ಯವಿಲ್ಲ. ನಾವು ಪಕ್ಷದ ನಿರ್ಧಾರಗಳ ಜೊತೆಗೆ ಇದ್ದೇವೆ. ಸಿದ್ದರಾಮಯ್ಯ ಅವರೊಂದಿಗೆ ಇದ್ದೇವೆ, ಮುಂದುವರೆಯುತ್ತೇವೆ” ಎಂದು ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ರಹಸ್ಯ ಮಾತುಕತೆ ಹೊರಬಿದ್ದ ನಂತರ, ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ನಡೆಯುತ್ತಿರುವ ಆಂತರಿಕ ಚರ್ಚೆಗಳು ಮತ್ತೆ ತೀವ್ರವಾಗಿವೆ.