ಬೆಂಗಳೂರು, ನ. 26 (DaijiworldNews/TA): ಕನ್ನಡದಲ್ಲಿ ಕೆಂಪು, ಹಿಂದಿಯಲ್ಲಿ ಲಾಲ್, ಮಲಯಾಳಂನಲ್ಲಿ ಚೋಪು, ಆಂಗ್ಲಭಾಷೆಯಲ್ಲಿ ರೆಡ್ ಎಂದು ಹೇಳುವ ಈ ಬಣ್ಣದ ಹಿಂದೊಂದು ಕಥೆ ಇದೆ. ಹೌದು ಅಪಾಯ ಅಂದಾಕ್ಷಣ ಬಣ್ಣದ ವಿಚಾರದಲ್ಲಿ ನಮಗೆ ಮೊದಲು ನೆನಪಿಗೆ ಬರೋ ವರ್ಣವೇ ಕೆಂಪು. ಪ್ರತಿದಿನ ನಮ್ಮ ಸುತ್ತಲೂ ಕಾಣಿಸಿಕೊಳ್ಳುವ ಅಪಾಯ ಸೂಚನೆಗಳು, ಸಂಚಾರ ದೀಪಗಳು, ಅಗ್ನಿ ಶಾಮಕ ಉಪಕರಣಗಳು ಎಲ್ಲೆಡೆ ಕೆಂಪು ಬಣ್ಣವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ಯಾಕೆ ಅಪಾಯದ ಸೂಚನೆಗಳಿಗೆ ಇತರ ಬಣ್ಣಗಳ ಬದಲು ಕೆಂಪು ಬಣ್ಣವನ್ನೇ ಆಯ್ಕೆ ಮಾಡಲಾಗಿದೆ? ಈ ಹಿಂದೆ ಒಂದು ಗಟ್ಟಿಯಾದ ವೈಜ್ಞಾನಿಕ ಕಾರಣಗಳಿವೆ.

ತಜ್ಞರ ವಿವರಗಳ ಪ್ರಕಾರ, ಕೆಂಪು ಬಣ್ಣವು ದೃಶ್ಯವಲಯದ ಅತ್ಯಂತ ಉದ್ದದ ತರಂಗಾಂತರ ಹೊಂದಿರುವುದರಿಂದ ದೂರದಿಂದಲೂ ಸ್ಪಷ್ಟವಾಗಿ ಕಾಣುತ್ತದೆ. ಸಂಚಾರ ದೀಪಗಳಲ್ಲಿ “Stop” ಸಂಕೇತಕ್ಕೆ ಹಾಗೂ ಅಪಾಯಕಾರಿ ಪ್ರದೇಶಗಳ ಎಚ್ಚರಿಕೆ ಫಲಕಗಳಿಗೆ ಇದನ್ನೇ ಬಳಸುವುದೂ ಇದೇ ಕಾರಣ. ಜನರು ದೂರದಲ್ಲಿದ್ದರೂ ಕೆಂಪು ಬಣ್ಣವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.
ಮನೋವಿಜ್ಞಾನಿಗಳ ಪ್ರಕಾರ, ಕೆಂಪು ಬಣ್ಣವು ಮಾನವನ ಮೆದುಳಿಗೆ ತಕ್ಷಣ ಎಚ್ಚರಿಕೆ ನೀಡುವ ಸ್ವಭಾವ ಹೊಂದಿದೆ. ಈ ಬಣ್ಣ ಕಂಡ ಕ್ಷಣದಲ್ಲಿ ಮೆದುಳು ಹೆಚ್ಚು ಜಾಗೃತವಾಗುತ್ತಿದ್ದು, ವ್ಯಕ್ತಿ ಸಹಜವಾಗಿಯೇ ಎಚ್ಚರವಾಗುತ್ತಾನೆ. ತುರ್ತು ಪರಿಸ್ಥಿತಿಗಳಲ್ಲಿ ಬೇಗ ಪ್ರತಿಕ್ರಿಯೆ ನೀಡಬೇಕಿರುವುದರಿಂದ ಕೆಂಪು ಬಣ್ಣ ಅತ್ಯಂತ ಪರಿಣಾಮಕಾರಿ.
ಕಣ್ಣಿಗೆ ಬೇಗ ತಾಕುವ ಬಣ್ಣವಾಗಿರುವ ಕಾರಣಕ್ಕೂ ಕೆಂಪು ಅಪಾಯ ಸೂಚನೆಗಳಿಗೆ ಸೂಕ್ತ. ಕಪ್ಪು, ನೀಲಿ ಅಥವಾ ಹಸಿರು ಬಣ್ಣಗಳು ದೂರದಿಂದ ಸ್ಪಷ್ಟವಾಗಿ ಗೋಚರಿಸುವುದಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಒಟ್ಟಾಗಿ, ಕೆಂಪು ಬಣ್ಣವು ವೈಜ್ಞಾನಿಕ, ಮಾನಸಿಕ ಹಾಗೂ ಪರಂಪರೆಯ ಕಾರಣಗಳಿಂದಲೂ ಜಾಗತಿಕವಾಗಿ ‘ಅಪಾಯ’ ಮತ್ತು ‘ತುರ್ತು’ ಸೂಚನೆಗಳ ಬಣ್ಣವಾಗಿ ಸ್ವೀಕರಿಸಲಾಗಿದೆ.